ಪಕ್ಷ ತೊರೆಯಲ್ಲ, ರಾಜೀನಾಮೆ ನೀಡಲು ತಲೆಕೆಟ್ಟಿಲ್ಲ: ಜೆಡಿಎಸ್ ಶಾಸಕ ಮಂಜುನಾಥ್

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಹೆಚ್.ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ. ಇತ್ತ ದಿಢೀರ್ ಎಂದು ವಿಧಾನಸೌಧಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಆಗಮಿಸಿದ್ದು, ತೀವ್ರ ಕುತೂಹಲವನ್ನು ಹುಟ್ಟುಹಾಕಿತು.

ನಾನು ಪಕ್ಷ ತೊರೆಯಲ್ಲ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲ್ಲ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಜನತೆ ಜೆಡಿಎಸ್, ಸಿಎಂ ಮತ್ತು ದೇವೇಗೌಡರನ್ನು ನೋಡಿ ಮತ ಹಾಕಿ ಗೆಲ್ಲಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನನಗೆ ತಲೆಕೆಟ್ಟಿಲ್ಲ. ರಾಜೀನಾಮೆ ನೀಡಿದ್ದು ಅವರ ವೈಯಕ್ತಿಕ ವಿಚಾರ ಎಂದು ತಿಳಿಸಿದರು.

ಈಗಾಗಲೇ ಜೆಡಿಎಸ್ ಶಾಸಕರಾದ ಹೆಚ್.ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡ ಶನಿವಾರ ರಾಜೀನಾಮೆ ನೀಡಿ ಮುಂಬೈ ಸೊಫಿಟೆಲ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಭಾನುವಾರ ಸಂಜೆ ವೇಳೆ ಅತೃಪ್ತ ಶಾಸಕರು ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಮುಂಬೈ ಸೊಫಿಟೆಲ್ ಹೋಟೆಲ್ ಮುಂಭಾಗದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅತೃಪ್ತ ಶಾಸಕರ ಪರವಾಗಿ ಮಾತನಾಡಿದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ನಮ್ಮ ನಿರ್ಧಾರ ದೃಢವಾಗಿದ್ದು ಯಾವ 13 ಶಾಸಕರೂ ತಮ್ಮ ರಾಜೀನಾಮೆಯನ್ನು ಹಿಂಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದರು.

Comments

Leave a Reply

Your email address will not be published. Required fields are marked *