ಕಾಡಿಗೆ ಹೊರಟಿತು ಗಜಪಡೆ – ಬೀಳ್ಕೊಡಲು ಬರಲಿಲ್ಲ ಜನಪ್ರತಿನಿಧಿಗಳು

ಮೈಸೂರು: ನಾಡಹಬ್ಬ ದಸರಾ ಯಶಸ್ವಿಯಾಗಿದ್ದು, ಇಂದು ಸಂಪ್ರದಾಯಿಕವಾಗಿ ಗಜಪಡೆಗೆ ಪೂಜೆ ನೇರವೇರಿಸಿ ಸ್ವಸ್ಥಾನಕ್ಕೆ ಕಳುಹಿಸಲಾಯಿತು. ಅರಮನೆಯಿಂದ ಗಜಪಡೆಯ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ ಕೊಡಲಾಯಿತು. ಈ ವೇಳೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಈ ವರ್ಷದ ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಗೆ ಇಂದು ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕಾಡಿಗೆ ಬೀಳ್ಕೊಡಲಾಯಿತು. ಒಂದು ತಿಂಗಳ ಹಿಂದೆ ಗಜಪಡೆಯ ಸ್ವಾಗತಕ್ಕೆ ನಾ ಮುಂದು ತಾ ಮುಂದು ಎಂದು ಬಂದಿದ್ದ ಜನಪ್ರತಿನಿಧಿಗಳು ಆನೆಗಳ ಬೀಳ್ಕೊಡಲು ಮಾತ್ರ ಬರಲೇ ಇಲ್ಲ. ಜನಪ್ರತಿನಿಧಿಗಳು ಇರಲಿ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಎಸ್‍ಪಿ ಹೀಗೆ ಯಾರೊಬ್ಬರು ಬರಲೇ ಇಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಮಾತ್ರ ಗಜಪಡೆಯ ಬೀಳ್ಕೊಡುಗೆಯಲ್ಲಿ ಭಾಗವಹಿಸಿದ್ದರು. ಅಲ್ಲಿಗೆ ದಸರಾ ಮುಗಿದ ಮೇಲೆ ಗಜಪಡೆ, ಅದರ ಮಾವುತ – ಕಾವಾಡಿಗಳು ಯಾರಿಗೆ ಬೇಕು ಎಂಬ ಮಾತನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಕ್ಷರಶಃ ಸತ್ಯ ಮಾಡಿದರು.

ಈ ನಡುವೆ ಎಲ್ಲ ಆನೆಗಳನ್ನು ಲಾರಿಗಳಿಗೆ ಹತ್ತಿಸುವಾಗ ಆ ಭಾವನಾತ್ಮಕ ಕ್ಷಣ ಕಂಡು ಎಲ್ಲರಿಗು ಕಣ್ತುಂಬಿ ಬಂತು. ಇದಕ್ಕೆ ಕಾರಣ ನಾನು ಅರಮನೆಯಿಂದ ಹೋಗೋದಿಲ್ಲ ಎಂಬಂತೆ ಲಕ್ಷ್ಮೀ ಆನೆ ಲಾರಿ ಏರದೆ ಸತಾಯಿಸುತ್ತಿತ್ತು. ಸತತ ಎರಡು ಗಂಟೆಗಳ ಕಾಲ ಅರ್ಜುನ, ಗೋಪಿ, ವಿಕ್ರಮ ಆನೆಗಳು ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲು ಎಷ್ಟೇ ಪ್ರಯತ್ನಪಟ್ಟರು ಲಾರಿ ಏರದೆ ನಾ ಹೋಗಲ್ಲ. ಹೋಗಲ್ಲ ಎಂದು ಹಠ ಹಿಡಿದಿತ್ತು. ಈ ವೇಳೆ ಕಡೆಯ ಪ್ರಯತ್ನವೆಂಬಂತೆ ಮಾವುತರು ಸೇರಿದಂತೆ ಆನೆಗಳ ಸಹಾಯದೊಂದಿಗೆ ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲಾಯಿತು.

ಇಂದು ದಸರಾದಲ್ಲಿ ಭಾಗಿಯಾಗಿದ್ದ 10 ಆನೆಗಳಿಗೆ ಮಾತ್ರ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಇನ್ನೂ ಉಳಿದ ಮೂರು ಆನೆಗಳನ್ನು ಚಾಮರಾಜನಗರಕ್ಕೆ ಹುಲಿ ಕಾರ್ಯಚರಣೆಗಾಗಿ ಕಳುಹಿಸಲಾಗಿದೆ.

https://www.youtube.com/watch?v=xz6CgKrcUOs

Comments

Leave a Reply

Your email address will not be published. Required fields are marked *