ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್‌ ಹಾಜರ್

– ಮೂರು ಗಂಟೆಗಳ ಕಾಲ ಸಿನಿಮಾ ವೀಕ್ಷಿಸಿದ ದಾಸ

ಬೆಂಗಳೂರು: ಬೆನ್ನು ನೋವಿನ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಗೈರಾಗಿದ್ದ ದರ್ಶನ್‌ (Darshan) ಅವರು ಗೆಳೆಯ ಧನ್ವೀರ್‌ (Dhanveer Gowda) ಅಭಿನಯದ ವಾಮನ (Vaamana) ಸಿನಿಮಾವನ್ನು ವೀಕ್ಷಿಸಿದ್ದಾರೆ.

ಬುಧವಾರ ರಾತ್ರಿ ಜಿಟಿ ಮಾಲ್‌ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಈ ಶೋ ವೀಕ್ಷಿಸಲು ದರ್ಶನ್‌ ರಾತ್ರಿ 8 ಗಂಟೆಯ ವೇಳೆಗೆ ಮಾಲ್‌ಗೆ ಆಗಮಿಸಿದ್ದರು.

ಬೆನ್ನು ನೋವನ್ನು ಲೆಕ್ಕಿಸದೇ ಆಪ್ತನ ಸಿನಿಮಾವನ್ನು ದರ್ಶನ್‌ ಸುಮಾರು ಮೂರು ಗಂಟೆಗಳ ಕಾಲ ಕುಳಿತು ವೀಕ್ಷಿಸಿದ್ದಾರೆ. ಮಾಲ್‌ನಲ್ಲಿ ದರ್ಶನ್ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಇದನ್ನೂ ಓದಿ: Renukaswamy Case | ಕೋರ್ಟ್‌ ವಿಚಾರಣೆಗೆ ದರ್ಶನ್‌ ಗೈರಾಗಿದ್ದೇಕೆ?

 

ಏ.8 ರಂದು ದರ್ಶನ್‌ 57ನೇ ಸಿಸಿಹೆಚ್ ನ್ಯಾಯಾಲಯದ (Court) ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್‌ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದ್ದರು.

ಈ ವೇಳೆ ನ್ಯಾಯಾಧೀಶರು (Judge) ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆಗೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು. ವಿನಾಯಿತಿಗೆ ಮನವಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಮಂಗಳವಾರದ ವಿಚಾರಣೆಗೆ ಪವಿತ್ರಾ ಗೌಡ ಮತ್ತು ಉಳಿದ ಆರೋಪಿಗಳು ಹಾಜರಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕೋರ್ಟ್‌ ಜಾಮೀನು (Bail) ನೀಡಿದೆ. ಜಾಮೀನು ಪಡೆದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ (Court) ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ.