ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ: ದರ್ಶನ್

-ಅಧಿಕಾರ ಇವತ್ತು ಒಬ್ಬರತ್ರ, ನಾಳೆ ಇನ್ನೊಬ್ಬರ ಹತ್ರ ಇರುತ್ತೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ನಟ ದರ್ಶನ್ ಎರಡು ದಿನದ ಹಿಂದೆ ಇಂದು ಟ್ರೈಲರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಅದರಂತೆಯೇ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

ಟ್ರೈಲರ್ ಶುರುವಿನಲ್ಲೇ “ನಮ್ಮ ಜೊತೆ ಇರುವವರನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಮೇಲೆ  ಇರುವವನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂಬ ಡೈಲಾಗ್ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಮನೆಗೆ ದೊಡ್ಡ ಮಗನಾಗಿ ತನ್ನ ತಮ್ಮಂದಿರನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಡೆಯನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪ್ರೀತಿ, ಕುಟುಂಬ, ಎಮೋಷನಲ್, ಆ್ಯಕ್ಷನ್ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ.

ರೈತರಿಗೆ ಮೋಸ ಮಾಡುವವರ ವಿರುದ್ಧ ಗಜೇಂದ್ರನಾಗಿ ಹೋರಾಡುವ ಒಡೆಯನಾಗಿಯೂ ಕಾಣಿಸಿಕೊಂಡಿದ್ದರು. ಜೊತೆಗ ಸಾಧುಕೋಕಿಲಾ, ಚಿಕ್ಕಣ್ಣ ಅವರ ಕಾಮಿಡಿಯ ಪಂಚಿಂಗ್ ಡೈಲಾಗ್ ಪ್ರೇಕ್ಷಕರನ್ನು ರಂಜಿಸುತ್ತವೆ. ಒಟ್ಟಿನಲ್ಲಿ ಒಂದು ಕರ್ಮಷಿಯಲ್ ಸಿನಿಮಾವಾಗಿ ಒಡೆಯ ಚಿತ್ರ ಮೂಡಿ ಬಂದಿದೆ. ಟ್ರೈಲರ್ 2.23 ನಿಮಿಷಗಳಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. ಜೊತೆಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಟ್ವೀಟ್ ಮಾಡಿದ್ದ ದರ್ಶನ್, “ಒಡೆಯ ಸಿನಿಮಾ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಡಿಸೆಂಬರ್ 1 ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದ್ದರು. ಸಿನಿಮಾದ ಹಾಡು ಬಿಡುಗಡೆಯ ವೇಳೆಯೂ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

ಇದೊಂದು ಸಹೋದರರ ಸಿನಿಮಾವಾಗಿದ್ದು, ಎಂ.ಡಿ.ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಇದೇ ತಿಂಗಳ 12ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *