ದರ್ಶನ್-ನಿಖಿಲ್ ಮುಖಾಮುಖಿಗೆ ವೇದಿಕೆ ಸಜ್ಜು

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಎಲ್ಲಿಯೂ ಮುಖಾಮುಖಿಯಾಗಿಲ್ಲ. ಇದೀಗ ಇಬ್ಬರೂ ಮುಖಾಮುಖಿಯಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ವೇದಿಕೆಯೂ ಸಜ್ಜಾಗಿದೆ.

ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ನಿರ್ಮಾಪಕ ಮುನಿರತ್ನ ಕಾರ್ಯಕ್ರಮವನ್ನು ಭರ್ಜರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಇದೇ ತಿಂಗಳು 21ಕ್ಕೆ ಶಿವರಾತ್ರಿಯ ದಿನ ಕುರುಕ್ಷೇತ್ರ 100ನೇ ದಿನದ ಕಾರ್ಯಕ್ರಮ ನಡೆಯುತ್ತಿದೆ. ಸಿಲಿಕಾನ್ ಸಿಟಿಯ ಜೆ.ಪಿ.ಪಾರ್ಕ್‍ನಲ್ಲಿ ಸಂಜೆ 7ರಿಂದ ರಾತ್ರಿ 11 ಗಂಟೆ ವರೆಗೂ ಕಾರ್ಯಕ್ರಮ ನಡೆಯಲಿದೆ. ಸ್ಯಾಂಡಲ್‍ವುಡ್‍ನ ತಾರಾಗಣವೇ ಭಾಗವಹಿಸಲಿದೆ ಎಂದು ಅಂದಾಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ಕಲಾವಿದರೆಲ್ಲ ಭಾಗಿಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಕೂಡ ಕಾರ್ಯಕ್ರಮದಲ್ಲಿ ಹಾಜರಾಗುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರು ಸ್ಟಾರ್ ನಟರ ಸಮಾಗಮಕ್ಕೆ ಈ ಬಾರಿಯ ಶಿವರಾತ್ರಿ ಸಾಕ್ಷಿಯಾಗಲಿದೆ ಎನ್ನಲಾಗಿದೆ.

ಈ ಕುರಿತು ಡಿ ಬಾಸ್ ಈಗಾಗಲೇ ಖಚಿತಪಡಿಸಿದ್ದು, ಇತ್ತೀಚೆಗೆ ಮಾತನಾಡಿದ್ದ ದರ್ಶನ್, ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಖಚಿತಪಡಿಸಿದ್ದಾರೆ. ಹೀಗಾಗಿ ಈ ಇಬ್ಬರು ನಟರು ಶತದಿನೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಅದ್ಧೂರಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಬಿಟ್ಟು ಬೇರೆ ಯಾರೆಲ್ಲ ಕಲಾವಿದರು ಭಾಗಿಯಾಗಲಿದ್ದಾರೆ ಎಂಬ ಕುತೂಹಲ ಸಹ ಮೂಡಿದೆ. ಒಟ್ಟಿನಲ್ಲಿ ಕಾರ್ಯಕ್ರಮವನ್ನು ಭರ್ಜರಿಯಾಗಿಯೇ ನಡೆಸಲು ಉದ್ದೇಶಿಸಲಾಗಿದೆ.

ಕುರುಕ್ಷೇತ್ರ ಸಿನಿಮಾ ಕಳೆದ ವರ್ಷ ಆಗಸ್ಟ್‍ನಲ್ಲಿ ತೆರೆ ಕಂಡಿತ್ತು. ದುರ್ಯೋಧನನಾಗಿ ಅಬ್ಬರಿಸಿದ್ದ ದರ್ಶನ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೆ ಅಭಿಮನ್ಯು ಪಾತ್ರಕ್ಕೂ ಅಷ್ಟೇ ಮೆಚ್ಚುಗೆ ವ್ಯಕ್ತವಾಗಿತ್ತು. ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣದ ಕುರುಕ್ಷೇತ್ರದಲ್ಲಿ ಸಾಕಷ್ಟು ಕಲಾವಿದರು ಬಣ್ಣಹಚ್ಚಿದ್ದರು. ಇನ್ನೂ ವಿಶೇಷವೆಂದರೆ ರೆಬಲ್ ಸ್ಟಾರ್ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದರು. ಸ್ಯಾಂಡಲ್‍ವುಡ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕುರುಕ್ಷೇತ್ರ ಸ್ವಲ್ಪ ತಡವಾಗಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ.

Comments

Leave a Reply

Your email address will not be published. Required fields are marked *