ಅಷ್ಟೇ ಸಾರ್ ಜೀವನದಲ್ಲಿ ಮಾಡಿರೋದು, ಮತ್ತೇನು ಮಾಡಿಲ್ಲ: ದರ್ಶನ್

ಬೆಂಗಳೂರು: 43ನೇ ವಸಂತಕ್ಕೆ ಕಾಲಿಟ್ಟಿರುವ ದರ್ಶನ್ ಅಭಿಮಾಮಿಗಳ ಜೊತೆ ಖುಷಿಯಿಂದ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಷ್ಟೇ ಸಾರ್ ಜೀವನಲ್ಲಿ ನಾನು ಮಾಡಿರೋದು, ಮತ್ತೇನು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದರ್ಶನ್ ಅವರಿಗೆ ಶುಭಕೋರಲು ಸಾವಿರಾರು ಅಭಿಮಾನಿಗಳು ರಾತ್ರಿಯೇ ಡಿ ಬಾಸ್ ಮನೆ ಮುಂದೆ ಜಮಾಯಿಸಿದ್ದರು. ಕಳೆದ ಬಾರಿಯಂತೆ ಈ ಬಾರಿ ಕೂಡ ದರ್ಶನ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್ ಹುಟ್ಟುಹಬ್ಬದ ಖುಷಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಾವಿರಾರು ಸಂಖ್ಯೆ ಬಂದಿರೋದು ಹೇಗೆ ಅನಿಸುತ್ತಿದೆ ಎಂದು ಕೇಳಿದಾಗ, “ಅಷ್ಟೇ ಸಾರ್ ನಾನು ಜೀವನದಲ್ಲಿ ಮಾಡಿರೋದು. ಮತ್ತೇನು ಮಾಡಿಲ್ಲ” ಎಂದು ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿಯನ್ನು ಹೊಗಳಿದರು. ಇಂದು ಸಂಜೆವರೆಗೂ ಅಭಿಮಾನಿಗಳನ್ನು ಭೇಟಿ ಮಾಡೋದೊಂದೆ ಕಾರ್ಯಕ್ರಮ. ಬೇರೇನು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 43ನೇ ವಸಂತಕ್ಕೆ ಕಾಲಿಟ್ಟ ದರ್ಶನ್ – ಕೇಕ್ ಕತ್ತರಿಸದೆ ಸರಳವಾಗಿ ಡಿ ಬಾಸ್ ಹುಟ್ಟುಹಬ್ಬ

ಪ್ರತಿವರ್ಷದಂತೆ ಈ ವರ್ಷವೂ ಇದೆ. ಅಭಿಮಾನಿಗಳು ಬರ್ತಿದ್ದಾರೆ, ಬಂದಿದ್ದಾರೆ. ಮೊಲ, ಬಾತು ಕೋಳಿ ಗಿಫ್ಟ್ ತಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೇಕ್ ಇಲ್ಲ, ಎಲ್ಲಾ ನೀಟಾಗಿದೆ. ಇವರು ಕೊಡೋ ದವಸ ಧಾನ್ಯಗಳು ಸಾಕಷ್ಟು ಜನರಿಗೆ ಉಪಯೋಗ ಆಗ್ತಿದೆ. ಅಭಿಮಾನಿಗಳು ಕೊಟ್ಟ ಈ ದಾನದಿಂದ ಮನೆ ತುಂಬುತ್ತಿದೆ ಎಂದು ಅಭಿಮಾನಿಗಳು ಕೊಟ್ಟ ಉಡುಗೊರೆಗಳ ಬಗ್ಗೆ ದರ್ಶನ್ ಹೇಳಿದರು.

ರಾಬರ್ಟ್ ಟೀಸರ್ ಬಗ್ಗೆ ಮಾತನಾಡಿ, ಸದ್ಯಕ್ಕೆ ಇದಷ್ಟೇ. ನೀವು ಈಗ ನೋಡಿರೋದು 10% ಮಾತ್ರ. ಇನ್ನೋನು 1 ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತೆ ಎಂದು ಪ್ರತಿಕ್ರಿಯಿಸಿದರು. ರಾಜವೀರ ಮದಕರಿ ಶೂಟಿಂಗ್ ಶುರುವಾಗಿದೆ. ಸಿನಿಮಾ ಮುಗಿಯೋದು ಇನ್ನು ಸಮಯ ಬೇಕು. ಅದರ ಬಗ್ಗೆ ಮುಂದೆ ಹೇಳ್ತಿನಿ ಎಂದರು. ಇದನ್ನೂ ಓದಿ: ಪ್ರೀತಿಯಿಂದ ಬಂದ್ರೆ ರಾಮ, ತಿರುಗಿ ಬಿದ್ರೆ ರಾವಣ ಎಂದ ‘ರಾಬರ್ಟ್’

ಯಾವುದೇ ಕೇಕ್, ಹಾರ, ಪಾಟಾಕಿ ಸಿಡಿಸಿ ನನ್ನ ಹುಟ್ಟುಹಬ್ಬ ಮಾಡಬೇಡಿ, ಅದೇ ಹಣದಲ್ಲಿ ದವಸ ಧಾನ್ಯ ತಂದು ಕೊಡಿ. ಅದನ್ನು ನಾನು ತಲುಪಿಸ ಬೇಕಾದ ಸ್ಥಳಕ್ಕೆ ಸೇರಿಸುವ ಜವಾಬ್ದಾರಿ ನನ್ನದು ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅವರ ಮಾತಿಗೆ ಬೆಲೆಕೊಟ್ಟ ಅಭಿಮಾನಿಗಳು ಯಾವುದೇ ಕೇಕ್, ಹಾರ ತರದೇ ಸರಳವಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿದರು.

ನೆಚ್ಚಿನ ನಟನ ನೋಡೋಕೆ ಕಿಲೋ ಮೀಟರ್ ಗಟ್ಟಲೇ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಯಾರೊಬ್ಬರಿಗೂ ನಿರಾಸೆ ಮಾಡದ ದರ್ಶನ್ ಎಲ್ಲಾ ಅಭಿಮಾನಿಗಳಿಗೆ ದರ್ಶನ ನೀಡಿ, ಶೆಕ್ ಹ್ಯಾಂಡ್ ಕೊಟ್ಟು ಖುಷಿ ಪಡಿಸಿದರು. ಆದರೆ ಸೆಲ್ಫಿಗೆ ಮಾತ್ರ ನೋ ಅಂದರು. ಹೀಗಾಗಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಆದರೂ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಕೆಲವು ಕ್ರೇಜಿ ಫ್ಯಾನ್ಸ್ ಗೆ ಡಿಬಾಸ್ ಟೀಮ್ ಅವಕಾಶ ಕೊಡಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ದರ್ಶನ್ ಮನೆ ಮುಂದೆ ನೂಕು ನುಗ್ಗಲು ಸೃಷ್ಟಿಯಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮಹಿಳೆಯರು, ಹೆಣ್ಣು ಮಕ್ಕಳು, ಅಂಗವಿಕಲ ಅಭಿಮಾನಿಗಳು ಕೂಡ ದರ್ಶನ್‍ಗೆ ಹುಬ್ಬಹಬ್ಬಕ್ಕೆ ಶುಭಕೋರಿ ಹರಸಿದರು.

Comments

Leave a Reply

Your email address will not be published. Required fields are marked *