ಕಾಂಗ್ರೆಸ್ಸಲ್ಲಿ ದಲಿತ ಸಿಎಂಗೆ ಸಿದ್ದು ಅಡ್ಡಿನಾ..?- ಪರಂ ಹೇಳಿಕೆ ಪ್ರಸ್ತಾಪಿಸಿ ಬಿಜೆಪಿ ತಿರುಗೇಟು

siddaramaiah

ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ಸಿಎಂ ಅಭ್ಯರ್ಥಿ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಒಂದೆಡೆ ಸಿದ್ದರಾಮಯ್ಯ, ಇನ್ನೊಂದೆಡೆ ಡಿ.ಕೆ ಶಿವಕುಮಾರ್. ಈ ಇಬ್ಬರ ಮಧ್ಯೆ ಜಿ.ಪರಮೇಶ್ವರ್ ಸಿಎಂ ಕುರ್ಚಿ ಕನವರಿಕೆಯಲ್ಲಿದ್ದಾರೆ. ಆದರೆ ಸಿಎಂ ಆಗಬೇಕೆನ್ನುವ ಆಸೆಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ನಿನ್ನೆಯಷ್ಟೇ ಜಿ. ಪರಮೇಶ್ವರ್ ನಾನು ಸಿಎಂ ಆಗಬೇಕು ಅನ್ನಬೇಡಿ. ನೀವು ಇಲ್ಲಿ ಕೂಗಿದ್ರೆ ನನಗೆ ಅಲ್ಲಿ ಹೊಡೆತ ಬೀಳುತ್ತೆ ಅಂದಿದ್ದರು. ಡಿ.ಕೆ ಶಿವಕುಮಾರ್ ಕೂಡ ವ್ಯಕ್ತಿ ಪೂಜೆ ಇಲ್ಲ, ಪಕ್ಷದ ಪೂಜೆ ಅಷ್ಟೆ ಅಂತಾ ಹೋದಲ್ಲೆಲ್ಲಾ ಪದೇ ಪದೇ ಹೇಳ್ತಿದ್ದಾರೆ. ಸಿಎಂ ಆಗಬೇಕು ಅಂತಿದ್ದ ಸಿದ್ದರಾಮಯ್ಯ ಈಗ ಸೈಲೆಂಟ್ ಆಗಿದ್ದಾರೆ. ಈ ಮಧ್ಯೆ ಜಿ. ಪರಮೇಶ್ವರ್ ಹೇಳಿಕೆ ಪ್ರಸ್ತಾಪಿಸಿರುವ ಬಿಜೆಪಿ, ದಲಿತ ವಿರೋಧಿ ಕಾಂಗ್ರೆಸ್ ಅಂತ ಟ್ವೀಟ್ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುವುದೇ ತಪ್ಪೇ..? ಹಾಗಾದರೆ ಡಾ.ಜಿ.ಪರಮೇಶ್ವರ್‍ಗೆ ಹೊಡೆತ ಕೊಡ್ತಿರೋದ್ಯಾರು..? ಸಿದ್ದರಾಮಯ್ಯನವರೇ ನಿಮಗೇನಾದರೂ ಗೊತ್ತಾ ಅಂತ ಕಾಲೆಳೆದಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಬಾದಾಮಿಯಲ್ಲಿ ಮಾತಾಡಿದ ಸಿದ್ದರಾಮಯ್ಯ, ಐದಾರು ಕಡೆಗೆ ಸ್ಪರ್ಧೆಗೆ ಕರೆಯುತ್ತಿದ್ದಾರೆ. ಬಾದಾಮಿಯವರೂ ಕರೆಯುತ್ತಾರೆ, ಚಾಮರಾಜಪೇಟೆಯವರೂ ಕರೆಯುತ್ತಾರೆ, ಕೊಪ್ಪಳ, ಕೋಲಾರ, ಹುಣಸೂರು, ಚಿಕ್ಕನಾಯಕಹಳ್ಳಿಯಲ್ಲಿಯೂ ಕರೆಯುತ್ತಿದ್ದಾರೆ. ಆದರೆ ಹೈಕಮಾಂಡ್ ಎಲ್ಲಿ ನಿಲ್ಲು ಅನ್ನುತ್ತೋ ಅಲ್ಲಿ ನಿಲ್ಲುತ್ತೇನೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಟ್ವೀಟ್ ಮೂಲಕ ಕಾಲೆಳೆದಿದೆ. ಗೆಲ್ಲುವುದಕ್ಕೊಂದು ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಎಂದು ಹಂಗಿಸಿದೆ. ಸಿದ್ದರಾಮಯ್ಯರನ್ನು ಐದಾರು ಕಡೆಯಿಂದ ಅಲ್ಲ, ಅವರನ್ನು ಯಾರೂ ಕರೆಯುತ್ತಿಲ್ಲ. ಬರೀ ಬುರಡೆ ಬಿಡ್ತಿದ್ದಾರೆ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಣ ರಾಜಕೀಯ ಬಲು ಜೋರು – ಕತ್ತಿ ಸಭೆಗೆ ಪ್ರತಿಯಾಗಿ ಜಾರಕಿಹೊಳಿ ಮೀಟಿಂಗ್

ಇತ್ತ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಣ ವಾಗ್ಯುದ್ಧ ಮುಂದುವರಿದಿದೆ. ತುಮಕೂರೇನು ಅವ್ರಪ್ಪನ ಜಹಗೀರಾ ಎಂದು ಪ್ರಶ್ನೆ ಮಾಡಿದ್ದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ತುಮಕೂರು ನಮ್ಮಪ್ಪನ ಆಸ್ತಿಯೂ ಅಲ್ಲ, ಕುಮಾರಸ್ವಾಮಿ ಅಪ್ಪನ ಆಸ್ತಿಯೂ ಅಲ್ಲ. ಅದು ಸಾರ್ವಜನಿಕರ ಆಸ್ತಿ. ಪಾಪ ಅವರಿಗೆ ಅಷ್ಟು ಸಾಮಾನ್ಯ ಜ್ಞಾನ ಇಲ್ಲ ಅಂದ್ರೆ ನಾನೇನು ಮಾಡಕಾಗುತ್ತೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಂಪುಟ ಸರ್ಜರಿಗೆ ಡೆಡ್‍ಲೈನ್ – ಮಾರ್ಚಲ್ಲ ಈಗ್ಲೇ ವಿಸ್ತರಿಸಿ ಅಂತ ಬಿಗಿಪಟ್ಟು

ಜೆಡಿಎಸ್ ಅನ್ನು ತುಮಕೂರಿಂದ ಓಡಿಸಿರಿ ಅಂತ ನನ್ನ ಕಾರ್ಯಕರ್ತರಿಗೆ ಹೇಳೋದಕ್ಕೂ ನನಗೆ ಹಕ್ಕಿಲ್ವಾ? ಅದಕ್ಕೆ ಸಿದ್ದರಾಮಯ್ಯನವರ ಆಸ್ತಿನಾ ಅಂತ ಕೇಳಿದ್ರೆ…? ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿಗೆ ಯಾವಾಗ ಯಾಕೆ ಕೋಪ ಬರುತ್ತೆ ಗೊತ್ತಿಲ್ಲ. ಅದು ಯಾವಾಗ ಇಳಿಯುತ್ತದೆ ಅನ್ನೋದೂ ಗೊತ್ತಿಲ್ಲ. ಆದರೆ ನನಗಂತೂ ಕೋಪ ಬರಲ್ಲ. ಟೀಕೆಗಳನ್ನ ಸಹಿಸಿಕೊಳ್ಳುವ ಶಕ್ತಿ ಇದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *