ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

ಡೆಹ್ರಾಡೂನ್: 23 ವರ್ಷದ ದಲಿತ ಯುವಕನೊಬ್ಬ ಮೇಲ್ವರ್ಗದ ಜನರ ಮುಂದೆ ಊಟ ಮಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಮಾನವೀಯ ಘಟನೆಯೊಂದು ಉತ್ತರಾಖಂಡ್ ನ ಥೆರಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿ ಯುವಕನನ್ನು ಜಿತೇಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಏಪ್ರಿಲ್ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜೀತೆಂದ್ರ ಭಾನುವಾರ ಥೆರಿ ಜಿಲ್ಲೆಯ ಶ್ರಿಕೋಟ್ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೇಲ್ವರ್ಗದವರ ಮುಂದೆ ಕುರ್ಚಿಯಲ್ಲಿ ಕುಳಿತುಕೊಂಡು ತನ್ನ ಪಾಡಿಗೆ ತಾನು ಊಟ ಮಾಡಿಕೊಂಡಿದ್ದನು. ಈ ವೇಳೆ ಏಳು ಮಂದಿ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸದ್ಯ 7 ಮಂದಿ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಜಿತೇಂದ್ರ ಮೇಲ್ವರ್ಗದ ಜನರ ಮುಂದೆ ಕುಳಿತು ಊಟ ಮಾಡುತ್ತಿದ್ದುದರಿಂದ ತಾಳ್ಮೆ ಕಳೆದುಕೊಂಡು ಅವರು ಆತನಿಗೆ ಥಳಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಹಿರಿಯ ಪೊಲೀಸ್ ಅಧಿಕಾರಿ ಉತ್ತಮ್ ಸಿಂಗ್ ಜಿಮ್ ವಾಲಾ ಹೇಳಿದ್ದಾರೆ.

ಯುವಕನ ಮೇಲೆ ಹಲ್ಲೆ ನಡೆದ ಪರಿಣಾಮ ಗಂಭೀರ ಗಾಯಗೊಂಡು ಡೆಹ್ರಾಡೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ 9 ದಿನಗಳ ನಂತರ ಆತ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಘಟನೆ ಸಂಬಂಧ ಮೃತನ ತಂಗಿ ನೀಡಿದ ದೂರಿನಂತೆ ಗಜೇಂದ್ರ ಸಿಂಗ್, ಸೊಬಾನ್ ಸಿಂಗ್, ಕುಶಲ್ ಸಿಂಗ್, ಗಬ್ಬರ್ ಸಿಂಗ್, ಗಂಭೀರ್ ಸಿಂಗ್, ಹರ್ಬಿರ್ ಸಿಂಗ್ ಹಾಗೂ ಹುಕುಮ್ ಸಿಂಗ್ ಎಂಬ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *