ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ- ದಲಿತರಿಗೆ ಮನೆ ಬಾಡಿಗೆಗೆ ಕೊಡದೆ ಹೊರಹಾಕಿದ್ರು

ಕೊಪ್ಪಳ: ದೇಶದ 70 ನೇ ಸ್ವ್ಯಾತಂತ್ರ್ಯೋತ್ಸವದ ಹೊಸ್ತಿಲಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾತ್ರ ಜೀವಂತವಾಗಿದೆ. ದಲಿತ ಕುಟುಂಬವೊಂದನ್ನು ಬಾಡಿಗೆ ಮನೆಯಿಂದ ಹೊರ ಹಾಕುವ ಮೂಲಕ, ಅಸ್ಪೃಶ್ಯತೆ ಮಾಡಿದ್ದಲ್ಲದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

ಕುಕನೂರು ಪಟ್ಟಣದ ಮುತ್ತಣ್ಣ ಛಲವಾದಿ ಕುಟುಂಬವನ್ನು ಮನೆ ಮಾಲೀಕ ಮನೆಯಿಂದ ಹೊರ ಹಾಕುವ ಮೂಲಕ ಅಸ್ಪೃಶ್ಯತೆ ಆಚರಿಸುವ ಜೊತೆಗೆ ಅಮಾನವೀಯವಾಗಿ ವರ್ತಿಸಿದ್ದಾರೆ.

ಮುತ್ತಣ ನಾಲ್ಕು ದಿನದ ಹಿಂದೆ ಕುಕನೂರಿನ ಸಂಜಯ ನಗರದಲ್ಲಿನ ಹುಚ್ಚಪ್ಪ ಎಂಬುವರ ಮನೆ ಬಾಡಿಗೆ ಪಡೆದಿದ್ರು. ಸೋಮವಾರ ಬೆಳಗ್ಗೆ ತಮ್ಮ ದಿನಬಳಕೆ ವಸ್ತು ಮತ್ತು ಕುಟುಂಬ ಸಹಿತ ಬಾಡಿಗೆ ಮನೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಹುಚ್ಚಪ್ಪರ ಮನೆಯ ನೆಲ ಮಹಡಿಯಲ್ಲಿ ಬಾಡಿಗೆಗೆ ಇರುವ ಮಹೇಶ ಉಳ್ಳಾಗಡ್ಡಿ ಎಂಬಾತ ಮುತ್ತಣ್ಣ ಛಲವಾದಿ ಮನೆ ಪ್ರವೇಶ ಮಾಡುವುದನ್ನು ಆಕ್ಷೇಪಿಸಿದ್ದಾನೆ. ಒಂದಮ್ಮೆ ಅವರಿಗೆ ಮನೆ ಬಾಡಿಗೆ ನೀಡಿದರೆ ತಾವು ಮನೆ ಖಾಲಿ ಮಾಡುವುದಾಗಿ ಬೆದರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಮುತ್ತಣ ಮನೆಗೆ ತಂದಿದ್ದ ವಸ್ತುಗಳನ್ನು ಹೊರಹಾಕಿದ್ದಾನೆ. ಇದಕ್ಕೆ ಆಕ್ಷೇಪಿಸಿರುವ ದಲಿತ ಕುಟುಂಬ ಬೆಳಗ್ಗೆಯಿಂದ ರಾತ್ರಿಯವರೆಗೂ ತಮ್ಮ ವಸ್ತುಗಳ ಜೊತೆಗೆ ಮನೆ ಮುಂದೆ ಕುಳಿತಿದೆ. ಆದ್ರೂ, ಮನೆ ಮಾಲೀಕರ ಮತ್ತು ಸುತ್ತಲಿನ ಸವರ್ಣಿಯರ ಮನಸ್ಸು ಕರಗಿಲ್ಲ.

ವಿಷಯ ತಿಳಿದು ಸ್ಥಳೀಯ ಪಿಎಸ್‍ಐ ಮತ್ತು ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ನೆಪ ಮಾತ್ರಕ್ಕೆ ಭೇಟಿ ನೀಡಿದರು. ರಾತ್ರಿವರೆಗೆ ಮನೆ ಮುಂದೆ ಕುಳಿತಿದ್ದ ಆ ಕುಟುಂಬ ತಮಗೆ ನ್ಯಾಯ ಸಿಗುವುದಿಲ್ಲ ಎಂದು ತಿಳಿದು ರಾತ್ರಿ ವೇಳೆಗೆ ದಲಿತ ಕೇರಿಯ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡ್ರು. ಇದರಿಂದ ಮನನೊಂದ ಮುತ್ತಣ್ಣನ ಪತ್ನಿ ಸತಿದೇವಿ ದಲಿತರಾಗಿ ಹುಟ್ಟಿರೋದು ತಪ್ಪಾ ಅಂತ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡ್ರು.

Comments

Leave a Reply

Your email address will not be published. Required fields are marked *