ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

ಮಂಗಳೂರು: ಉಸೇನ್ ಬೋಲ್ಟ್ ಜಗತ್ತಿನ ಅತೀ ವೇಗದ ಓಟಗಾರ. ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಗುರಿತಲುಪುವ ಸಾಧಕ. ಉಸೇನ್ ಬೋಲ್ಟ್‌ನ ದಾಖಲೆಗಳನ್ನು ಬ್ರೇಕ್ ಮಾಡೋಕೆ ಸಾಧ್ಯನೇ ಇಲ್ಲ ಅಂತ ತಿಳಿದುಕೊಂಡವರಿಗೆ ಮಾತ್ರ ಇದು ಶಾಕಿಂಗ್ ನ್ಯೂಸ್. ಹೌದು ವೇಗದಲ್ಲಿ ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಕರಾವಳಿಯ ಕಂಬಳ ಕೋಣಗಳ ಓಟಗಾರ ಶ್ರೀನಿವಾಸ್ ಹೊಸ ದಾಖಲೆ ಬರೆದಿದ್ದಾರೆ.

ಸದೃಢ ಮೈಕಟ್ಟು, ಜಿಮ್‍ಗೆ ಹೋಗದೆ ಬೆಳೆದ ನ್ಯಾಚುರಲ್ ಸಿಕ್ಸ್ ಪ್ಯಾಕ್, ಕಂಬಳದ ಗದ್ದೆಗೆ ಇಳಿದರೆ ಸಾಕು ಚಿರತೆಯನ್ನೇ ನಾಚಿಸುವಂತಹ ವೇಗದಲ್ಲಿ ಓಡುವ ಶ್ರೀನಿವಾಸ ಗೌಡ ಈಗ ಕರಾವಳಿಯಲ್ಲಿ ಸಖತ್ ಫೆಮಸ್ ಆಗಿಬಿಟ್ಟಿದ್ದಾರೆ. ಕಂಬಳ ಕ್ರೀಡೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಎಂದೇ ಇವರು ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವಥಪುರ ನಿವಾಸಿ ಕಂಬಳ ಕೋಣದ ಓಟಗಾರ ಶ್ರೀನಿವಾಸ ಗೌಡ ಈಗ ಹೊಸ ದಾಖಲೆಯನ್ನು ಬರೆದಿದ್ದಾರೆ.

ವಿಶ್ವದ ಫಾಸ್ಟೆಸ್ಟ್ ರನ್ನರ್ ಉಸೇನ್ ಬೋಲ್ಟ್‌ನ ದಾಖಲೆಯನ್ನು ಪುಡಿಪುಡಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರ್‍ನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದಾರೆ.

ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡಿ ಉಸೇನ್ ಬೋಲ್ಟ್ ಮಾಡಿದ ದಾಖಲೆಯನ್ನು ಶ್ರೀನಿವಾಸಗೌಡ ಕಾಲು ಹೂತು ಹೋಗುವ ಕಂಬಳದ ಕೆಸರುಗದ್ದೆಯಲ್ಲಿ ಓಡಿ ಮುರಿದಿದ್ದಾರೆ. ಈ ಮೂಲಕ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದ್ದಾರೆ.

ಕಂಬಳದ ಗದ್ದೆಯಲ್ಲಿ ಮೊಣಕಾಲಿನವರೆಗೆ ಕೆಸರು ತುಂಬಿದ್ದು, ಒಂದು ಕೈಯಲ್ಲಿ ಕೋಣಗಳ ಹಗ್ಗ ಮತ್ತೊಂದು ಕೈಯಲ್ಲಿ ಬಾರುಕೋಲು ಹಿಡಿದು, ಸಮಚಿತ್ತದಿಂದ ಓಡಬೇಕಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡುವ ಶ್ರೀನಿವಾಸ ಗೌಡ ಅವರೇ ಬೋಲ್ಟಿಗಿಂತ ಕೂದಲೆಳೆಯ ಅಂತರದಲ್ಲಿ ಮುಂದಿದ್ದಾರೆ.

ಯಾವ ತರಬೇತಿಯನ್ನೂ ಪಡೆಯದೆ ಶ್ರೀನಿವಾಸ ಗೌಡ ತಮ್ಮ ಸ್ವಂತ ಆಸಕ್ತಿಯಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಾಖಲೆ ಮಾಡಿದ್ದಾರೆ. ಈ ಋತುವಿನ ಕಂಬಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಂಬಳ ಕೂಟದ ಚಿನ್ನದ ಓಟಗಾರನಾಗಿ ಪ್ರಸಿದ್ಧಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *