ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್

ಮಂಗಳೂರು: ಕೋವಿಡ್19 ಪಾಸಿಟಿವ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖವಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಮಗುವಿನ ತಾಯಿ ಹಾಗೂ ಅಜ್ಜಿಯ ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಅವರೂ ಕೂಡ ಇಂದು ಡಿಸ್ಚಾಜ್9 ಆಗಿದ್ದಾರೆ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 12 ಕೊರೊನಾ ಸೋಂಕಿತರಲ್ಲಿ 6 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ವಾರ ಪೂರ್ತಿ ಅಂದರೆ ಏಪ್ರಿಲ್ 5ರಿಂದ 11ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ.

ಜಿಲ್ಲೆಯ 10 ತಿಂಗಳ ಮಗುವಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲೇ ವಿಶಿಷ್ಟವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕೊರೊನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟ ಮಗುವಿನ ಐಸೋಲೇಶನ್‍ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಗೊಳಿಸಿದ್ದಾರೆ.

ಮಗುವಿನ ಗ್ರಾಮದಲ್ಲಿ ಯಾರಿಗೂ ಕೊರೊನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಮಗುವಿಗೆ ಕೊರೊನಾ ದೃಟಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಿ, ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಗ್ರಿ ಹಾಗೂ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿತ್ತು.

Comments

Leave a Reply

Your email address will not be published. Required fields are marked *