ಬೆಂಗಳೂರು: ಯಾವ್ಯಾವ ರಾಜ್ಯದಲ್ಲಿ ಯಾರ್ಯಾರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೋ ಅವರೆಲ್ಲಾ ತಿರುಗಾಡಲೇ ಬೇಕು. ಹೀಗಾಗಿ ಎಲ್ಲಾ ಕಡೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಗಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಜನರು ನಂಬುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಬಾರಿ ಸೋಲುವುದು ಖಚಿತ. ಈ ಮೂಲಕ ಔಟ್ ಆಫ್ ಪವರ್ ಆಗುತ್ತಾರೆ. ಸಿಎಂ ಕುಮಾರಸ್ವಾಮಿ ಹಾಗೂ ಚಂದ್ರಬಾಬು ನಾಯ್ಡು ಸಮಾನ ಮನಸ್ಕರು. ತಮ್ಮ ಪವರ್ ಹೋಗುತ್ತೆ ಅಂತ ಕುಮಾರಸ್ವಾಮಿಯವರು ಈಗಾಗಲೇ ನಿಶ್ಚಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಮೈತ್ರಿ ಸರ್ಕಾರದ ಅಸ್ತಿತ್ವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಸಾಯಂಕಾಲದವರೆಗೂ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಗರಿಷ್ಠ ಎಂದರೆ ನಾಡಿದ್ದು ಬೆಳಗ್ಗೆವರಗೆ ಮಾತ್ರ ಅವರು ಮುಖ್ಯಮಂತ್ರಿಯಾಗಿ ಇರುತ್ತಾರೆ. ಮೇ 24ರಂದು ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ. ಹೊಸ ಸರ್ಕಾರ ರಚನೆಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಶೇಕಡಾ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.
ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಮಾಜಿ ಸಚಿವ ರೋಷನ್ ಬೇಗ್ ಸತ್ಯ ಹೇಳಿದ್ದಾರೆ. ಕಾಂಗ್ರೆಸ್‍ನ ಕೆಲವರ ಒತ್ತಡಕ್ಕೆ ಸಹಿಸಿಕೊಂಡು ಸಾಕಾಗಿತ್ತು. ಹೀಗಾಗಿ ಎಲ್ಲವನ್ನೂ ಹೊರಹಾಕಿದ್ದಾರೆ. ಸಿದ್ದರಾಮಯ್ಯನವರು ರಾಜ್ಯ ಕಂಡ ಅತ್ಯಂತ ದುರಂಹಕಾರಿ ಮಾಜಿ ಸಿಎಂ ಎಂದು ಕಿಡಿಕಾರಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಒಬ್ಬ ಶಾಸಕರು ಮಾತ್ರ ಇದ್ದಾರೆ. ಉಳಿದ ಏಳೂ ವಿರೋಧ ಪಕ್ಷದ ಶಾಸಕರು. ಆದರೂ ನಾನು ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ. ಚುನಾವಣೆಯ ಕೊನೆಯ ಎರಡು ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ತಮ್ಮ ಎಲ್ಲಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಹೀಗಾಗಿ ಕಳೆದ ಬಾರಿಗಿಂತ ಗೆಲುವಿನ ಅಂತರದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು ಎಂದು ತಿಳಿಸಿದರು.

Leave a Reply