ಬಿಜೆಪಿಗಿಂತ ಮೊದಲೇ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಡಿಕೆಶಿ

– ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್
– ಒಂದು ಕ್ಷೇತ್ರದಲ್ಲಿ ಮೈತ್ರಿ ಬಗ್ಗೆ ಪ್ರಪೋಸಲ್‌ ಬಂದಿದೆ‌
– ಡಿ.ಕೆ.ಸುರೇಶ್‌ ಸಂಸತ್ತಿನಲ್ಲಿ ಇರೋಕೆ ಇಷ್ಟಪಟ್ಟಿದ್ದಾರೆ

ನವದೆಹಲಿ: ಬಿಜೆಪಿಗಿಂತ ಮೊದಲೇ ಕಾಂಗ್ರೆಸ್‌ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ತಿಳಿಸಿದರು.

ನವದೆಹಲಿಯಲ್ಲಿ ಶುಕ್ರವಾರ ಮಲ್ಲಿಕಾರ್ಜುನ ಮನೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಾಗಾಗಿ ರಾಹುಲ್ ಭೇಟಿ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಜಾಗಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಟಿಕೆಟ್ ವಿಚಾರ ಎಲ್ಲವೂ ಚರ್ಚೆ ಆಗಿದೆ. ಶೀಘ್ರದಲ್ಲೇ ಎಐಸಿಸಿ ಘೋಷಣೆ ಮಾಡಲಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಬಂದು ಹೋದ ಮೇಲೆ ಗೊತ್ತಾಗಲಿದೆ. ಆದಷ್ಟು ಬೇಗೆ ಪಟ್ಟಿ ಬಿಡುಗಡೆ ಆಗುತ್ತೆ. ಬಿಜೆಪಿಗಿಂತ ಮೊದಲೇ ಬಿಡುಗಡೆ ಆಗಲಿದೆ. ಏನೇನು, ಎಷ್ಟು ಒಮ್ಮತ ಇದೆ ಎಂಬುದೆಲ್ಲ ಕ್ಲಿಯರ್ ಆಗಿದೆ. ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ನೀಡಲಾಗುತ್ತದೆ. ಯಾವುದೇ ಚುನಾವಣಾ ಪೂರ್ವ ಮೈತ್ರಿ ಇಲ್ಲ. ಒಂದು ಕ್ಷೇತ್ರದಲ್ಲಿ ಮೈತ್ರಿ ಬಗ್ಗೆ ಪ್ರಪೋಸಲ್ ಬಂದಿದೆ. ಅದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಮನಗರದಲ್ಲಿ ಡಿ.ಕೆ‌.ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ಪರ್ಧೆ ಮಾಡಬೇಕೆಂದು ಪ್ರಪೋಸಲ್ ಇದೆ. ಡಿಕೆ.ಸುರೇಶ್ ಸಂಸತ್ತಿನಲ್ಲಿ ಇರಬೇಕು ಅಂತಾ ಇಚ್ಛೆ ಪಟ್ಟಿದ್ದಾರೆ. ಹೈಕಮಾಂಡ್ ಕೂಡ ಇಚ್ಛೆ ಪಟ್ಟಿದೆ. ರಾಜಕಾರಣದಲ್ಲಿ ಕೆಲವರು ಚೆಸ್ಕೆ ಮಾಡ್ತಾರೆ. ಆದರೆ ಇಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.

Comments

Leave a Reply

Your email address will not be published. Required fields are marked *