Cyclone Michaung ಎಫೆಕ್ಟ್- ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯ ಎಚ್ಚರಿಕೆ

ಬೆಂಗಳೂರು: ಮಿಚೌಂಗ್ ಚಂಡಮಾರುತದ (Cyclone Michaung) ಪರಿಣಾಮ ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಿಚೌಂಗ್ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಎರಡು ದಿನ ಭಾರೀ ಮಳೆಯಾಗುವ (Rain) ಸಾಧ್ಯತೆಗಳಿವೆ ಎಂದು ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ರಾಜಧಾನಿಯಲ್ಲಿ ಚಂಡಮಾರುತ ಎಫೆಕ್ಟ್ ನಿಂದಾಗಿ ಇಂದು ಬೆಳ್ಳಂಬೆಳಗ್ಗೆ ಚುಮುಚುಮು ಚಳಿ ಶುರುವಾಗಿದೆ. ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: Cyclone Michaung- ನೆಲ್ಲೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಲಕ ದುರ್ಮರಣ

ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಈ ಚಂಡಮಾರುತ ಇರಲಿದ್ದು, ಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ. ಈ ಹಿನ್ನೆಲೆ ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.