Cyclone Biparjoy – ಬೀಸಲಿದೆ 150 ಕಿ.ಮೀ ವೇಗದಲ್ಲಿ ಬಿರುಗಾಳಿ, ಈಗಾಗಲೇ 7,500 ಮಂದಿ ಸ್ಥಳಾಂತರ

– ಗುರುವಾರ ಮಧ್ಯಾಹ್ನ ಗುಜರಾತ್‌ ತೀರಕ್ಕೆ ಅಪ್ಪಳಿಸಲಿದೆ ಚಂಡಮಾರುತ
– ಗುಜರಾತ್‌, ಪಾಕಿಸ್ತಾನ ತೀರದಲ್ಲಿ ಭಾರೀ ವಿನಾಶ ಸಾಧ್ಯತೆ
– 67 ರೈಲುಗಳ ಸಂಚಾರ ರದ್ದು

ನವದೆಹಲಿ: ಅರಬ್ಬೀ ಸಮುದ್ರದ ತೀರ ಪ್ರದೇಶಗಳಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಬಿಪರ್‌ಜಾಯ್ ಚಂಡಮಾರುತ (Cyclone Biparjoy) ಗುರುವಾರ ಮಧ್ಯಾಹ್ನ ಗುಜರಾತ್‌ ತೀರಕ್ಕೆ (Gujarat Coast) ಅಪ್ಪಳಿಸುವ ಸಾಧ್ಯತೆಯಿದ್ದು, ಈಗಾಗಲೇ ಸುಮಾರು 7,500 ಜನರನ್ನು ಸ್ಥಳಾಂತರ ಮಾಡಲಾಗಿದೆ.

ಗಂಟೆಗೆ 150 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಗುಜರಾತ್‌ ಮತ್ತು ಪಾಕಿಸ್ತಾನದ (Pakistan) ಸಮುದ್ರ ತೀರದ ಪ್ರದೇಶಗಳಲ್ಲಿ ಭಾರೀ ವಿನಾಶ ಸೃಷ್ಟಿಸುವ ಆಂತಕ ಎದುರಾಗಿದೆ. ಗುಜರಾತ್‌ನ ಜಖೌ ಬಂದರಿನ ಬಳಿ ಗುರುವಾರ ಮಧ್ಯಾಹ್ನದ ವೇಳೆಗೆ ಅತ್ಯಂತ ತೀವ್ರವಾಗಿ ಚಂಡಮಾರುತ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಅರಬ್ಬೀ ಸಮುದ್ರದಲ್ಲಿ 58 ವರ್ಷಗಳಲ್ಲಿ ಜೂನ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಶಕ್ತಿಶಾಲಿ ಸೈಕ್ಲೋನ್ ಇದಾಗಿದ್ದು, 25 ವರ್ಷಗಳ ಬಳಿಕ ಜೂನ್‌ನಲ್ಲಿ ಗುಜರಾತ್ ಸಮುದ್ರ ತೀರಕ್ಕೆ ಅಪ್ಪಳಿಸುತ್ತಿರುವ ಚಂಡಮಾರುತ ಇದಾಗಿದೆ. ಭಾರೀ ಹಾನಿ ಮಾಡುವ ಸಾಧ್ಯತೆ ಇರುವ ಕಾರಣ ಪಶ್ಚಿಮ ರೈಲ್ವೇ ಒಟ್ಟು 67 ರೈಲುಗಳ ಸಂಚಾರವನ್ನು ರದ್ದು ಮಾಡಿದೆ.

ಕಛ್‌ (Kutch) ಮತ್ತು ಸೌರಾಷ್ಟ್ರ (Sourashtra) ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಅಧಿಕಾರಿಗಳು ಜನರನ್ನು ಸ್ಥಳಾಂತರ ಮಾಡುವ ಕೆಲಸ ಆರಂಭಿಸಿದ್ದಾರೆ. ಎರಡು ಜಿಲ್ಲೆಗಳಲ್ಲಿ ಸಮುದ್ರ ತೀರದಿಂದ 10 ಕಿ.ಮೀ ದೂರದವರೆಗೆ ನೆಲೆಸಿರುವ ಸುಮಾರು 7,500 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇಂದು ಮತ್ತಷ್ಟು ಜನರನ್ನು ಸ್ಥಳಾಂತರ ಮಾಡಲಾಗುತ್ತದೆ. ಇದನ್ನೂ ಓದಿ: ಹೆತ್ತ ತಾಯಿ ಕೊಂದು ಸೂಟ್‌ಕೇಸಲ್ಲಿ ಶವಹೊತ್ತು ಸ್ಟೇಷನ್‌ಗೆ ಬಂದ ಮಗಳು

ಪ್ರಧಾನಿ ನರೇಂದ್ರ ಮೋದಿ ಸೂಚನೆ ಹಿನ್ನಲೆಯಲ್ಲಿ19 ಎನ್‌ಡಿಆರ್‌ಎಫ್ ತಂಡಗಳನ್ನು ಸಿದ್ದವಾಗಿಡಲಾಗಿದೆ. ಪರಿಸ್ಥಿತಿ ಕೈಮೀರಿದರೆ ಸೇನೆ, ನೌಕಾ ಪಡೆಗೆ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.

ಗುಜರಾತ್ ಸರ್ಕಾರವು ಮುಂಜಾಗ್ರತೆಯಾಗಿ ಕರಾವಳಿ ಕಛ್‌, ಜಾಮ್‌ನಗರ, ದೇವಭೂಮಿ ದ್ವಾರಕಾ ಮತ್ತು ಜುನಾಗಢ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ.

ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿವೆ. ಈಗಾಗಲೇ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅಪಾಯಗಳನ್ನು ತಡೆಯುವಂತೆ ಸೂಚನೆ ನೀಡಿದ್ದು ಸ್ಥಳೀಯ ಆಡಳಿತಗಳು ತೀರ ಪ್ರದೇಶಗಳಿಗೆ ಜನರ ಪ್ರವೇಶ ನಿಷೇಧಿಸಿವೆ. ಬಿಪರ್‌ಜಾಯ್ ತೀವ್ರತೆ ಏನು, ಇದು ಮಾಡಬಹುದಾದ ಹಾನಿಗಳೇನು ಎನ್ನುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಅಧ್ಯಯನಗಳನ್ನು ನಡೆಸುತ್ತಿದ್ದು ಸರ್ಕಾರಕ್ಕೆ ನಿರಂತರ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದೆ.

 

ಮೋದಿ ಸಭೆ:
ಈ ಅಪಾಯಕಾರಿ ಚಂಡಮಾರುತದ ಹಿನ್ನೆಲೆ ಪ್ರಧಾನಿ ಮೋದಿ ಸುಮಾರು 1 ಗಂಟೆಗೂ ಅಧಿಕ ಕಾಲ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ,  ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.

ಪ್ರಧಾನಮಂತ್ರಿಗಳ ಸಭೆಯಲ್ಲಿ, ಹವಾಮಾನ ಇಲಾಖೆಯ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಗುಜರಾತ್‌ ತೀರಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ 125-130 ಕಿ.ಮೀ ನಡುವೆ ವೇಗವಾಗಿ ಗಾಳಿ ಬೀಸಲಿದ್ದು, ಇದು 150 ಕಿ.ಮೀ ವರೆಗೆ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ. ಜೂನ್ 14-15 ರಂದು ಸೌರಾಷ್ಟ್ರ, ಕಚ್‌ನಲ್ಲಿ ಭಾರೀ ಮಳೆಯಾಗಲಿದೆ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಹಾನಿಯ ಸಂದರ್ಭದಲ್ಲಿ, ತಕ್ಷಣದ ಸಹಾಯಕ್ಕಾಗಿ ಸನ್ನದ್ಧತೆಯೊಂದಿಗೆ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಮುಂತಾದ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವುಗಳಿಗೆ ಹಾನಿಯಾದ ಸಂದರ್ಭದಲ್ಲಿ ಅವುಗಳನ್ನು ತಕ್ಷಣವೇ ಮರುಸ್ಥಾಪಿಸಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ಸಿದ್ದವಿಡುವಂತೆ, ಅಗತ್ಯ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರ ಮಾಡಲು ಮತ್ತು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ.