ಹಿಂದೂವಲ್ಲದ ವ್ಯಕ್ತಿ ತಂದ ಆಹಾರ ಸ್ವೀಕರಿಸಲಾರೆ- ಝೊಮ್ಯಾಟೊ ಖಡಕ್ ತಿರುಗೇಟು

ನವದೆಹಲಿ: ಹಿಂದೂ ಅಲ್ಲದ ವ್ಯಕ್ತಿ ತಂದಿರುವ ಆಹಾರವನ್ನು ನಾನು ಸೇವಿಸಲಾರೆ. ಹಾಗಾಗಿ ನನ್ನ ಆರ್ಡರ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಹೇಳಿದ್ದ ವ್ಯಕ್ತಿಗೆ ಝೊಮ್ಯಾಟೊ ಕಂಪನಿ ಖಡಕ್ ತಿರುಗೇಟು ನೀಡಿದೆ.

ಅಮಿತ್ ಶುಕ್ಲಾ ತಮ್ಮ ಆರ್ಡರ್ ಕ್ಯಾನ್ಸಲ್ ಮಾಡಿ ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಮಾಡಿಕೊಂಡು ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಝೊಮ್ಯಾಟೊ ಆರ್ಡರ್ ನಾನು ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗುತ್ತಿತ್ತು. ನಾನು ಡೆಲಿವರಿ ಬಾಯ್ ನನ್ನು ಬದಲಿಸಿ ಎಂದು ಕೇಳಿದ್ದಕ್ಕೆ ಆಗಲ್ಲ ಎಂದರು.

ಕೊನೆಗೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಹಣ ರಿಫಂಡ್ ಮಾಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿತು. ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ರಿಫಂಡ್ ಬೇಕಾಗಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಅಮಿತ್ ಟ್ವಿಟ್ಟರ್ ನಲ್ಲಿ ಝೊಮ್ಯಾಟೊಗೆ ಟ್ಯಾಗ್ ಮಾಡಿಕೊಂಡಿದ್ದರು.

ಮತ್ತೊಂದು ಟ್ವೀಟ್‍ನಲ್ಲಿ ಝೊಮ್ಯಾಟೊ ಆ್ಯಪ್ ಅನ್ ಇನ್ಸಟಾಲ್ ಬಗ್ಗೆ ಹೇಳಿಕೊಂಡಿರುವ ಅಮಿತ್, ನಾನು ಆ ವ್ಯಕ್ತಿಯಿಂದ ಆಹಾರ ಸ್ವೀಕರಿಸಲ್ಲ ಎಂದು ಹೇಳುತ್ತಿದ್ದರೂ ಕಂಪನಿ ನನ್ನ ಮೇಲೆ ಒತ್ತಡ ಹಾಕುತ್ತಿದೆ. ಆರ್ಡರ್ ಕ್ಯಾನ್ಸಲ್ ಮಾಡಿದ್ರೂ ರಿಫಂಡ್ ಮಾಡಿಲ್ಲ. ಈ ಸಂಬಂಧ ನಮ್ಮ ವಕೀಲರ ಬಳಿ ಚರ್ಚಿಸುತ್ತೇನೆ ಎಂದು ಹೇಳುವ ಮೂಲಕ ಕೋರ್ಟ್ ಮೊರೆ ಹೋಗುವ ಮಾಹಿತಿ ನೀಡಿದ್ದಾರೆ.

ಝೊಮ್ಯಾಟೊ ತಿರುಗೇಟು:
ಅಮಿತ್ ಶುಕ್ಲಾ ಟ್ವೀಟಿಗೆ ಪ್ರತಿಕ್ರಿಯಿಸಿರುವ ಝೊಮ್ಯಾಟೊ, ಆಹಾರಕ್ಕೆ ಯಾವುದೇ ಧರ್ಮವಿರಲ್ಲ. ಆಹಾರವೇ ಒಂದು ಧರ್ಮ ಎಂದು ಚಿಕ್ಕದಾಗಿ ಬರೆದು ಖಡಕ್ ತಿರುಗೇಟು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಝೊಮ್ಯಾಟೊ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾಟ್ರ್ನನರ್ ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯಲ್ಲಿ ದುಃಖ ಆಗಲಾರದು ಎಂದು ಬರೆದು ಕೊನೆಗೆ ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *