ಕದ್ದು ಮುಚ್ಚಿ ಪ್ರೇಮಿಗಳ ವಿಡಿಯೋ ಸೆರೆ ಹಿಡಿಯುತ್ತಿದ್ದ ಭೂಪನಿಗೆ ಬಿದ್ವು ಗೂಸಾ

– ಕಬ್ಬನ್ ಪಾರ್ಕಿಗೆ ಬರುವ ಪ್ರೇಮಿಗಳೇ ಹುಷಾರ್!

ಬೆಂಗಳೂರು: ನಗರದ ಕಬ್ಬನ್ ಪಾರ್ಕಿಗೆ ಬರುವ ಪ್ರೇಮಿಗಳೇ ಹುಷಾರ್! ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳಿಗೆ ಯಾವುದೇ ಸೇಫ್ಟಿ ಇಲ್ಲ. ನಿಮ್ಮ ಏಕಾಂತದ ವಿಡಿಯೋವನ್ನು ನಿಮಗೆ ಗೊತ್ತಿಲ್ಲದಂತೆ ರೆಕಾರ್ಡ್ ಮಾಡುತ್ತಿದ್ದಾರೆ ಎಚ್ಚರ.

ಪ್ರೇಮಿಗಳಿಬ್ಬರು ಕಬ್ಬನ್ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿದ್ದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ವ್ಯಕ್ತಿಯೊಬ್ಬ ಇಂದು ಗೂಸಾ ತಿಂದಿದ್ದಾನೆ. ಸುಧೀರ್ ಪ್ರೇಮಿಗಳ ವಿಡಿಯೋ ಮಾಡಿ ಥಳಿತಕ್ಕೆ ಒಳಗಾದ ಆರೋಪಿ.

ಸುಧೀರ್ ಇಂದು ಮಧ್ಯಾಹ್ನ ಕಬ್ಬನ್ ಪಾರ್ಕ್ ನಲ್ಲಿ ಕದ್ದು ಮುಚ್ಚಿ ಪ್ರೇಮಿಗಳ ಏಕಾಂತದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರೇಮಿಗಳು ಮೊಬೈಲ್ ತೋರಿಸಿ ಎಂದು ಕೇಳಿದ್ದಾರೆ. ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋವನ್ನು ತೋರಿಸಲು ಸುಧೀರ್ ನಿರಾಕರಿಸಿದ್ದಕ್ಕೆ ಆತನ ಮೇಲೆ ಪ್ರೇಮಿಗಳಿಬ್ಬರು ಕಲ್ಲಿಂದ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಪರಿಣಾಮ ವಿಡಿಯೋ ಮಾಡುತ್ತಿದ್ದ ಕಿರಾತಕನ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕಬ್ಬನ್ ಪಾರ್ಕ್ ಪೊಲೀಸರು, ಸುಧೀರ್ ನನ್ನ ಬೌರಿಂಗ್ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆಗೆ ಕೊಡಿಸಿದ್ದಾರೆ.

ಪಾರ್ಕ್ ಗಳಲ್ಲಿ ಕಾಲ ಕಳೆಯುವುಕ್ಕೆ ಬರುವ ಪ್ರೇಮಿಗಳ ವಿಡಿಯೋವನ್ನು ಮಾಡಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಘಟನೆಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪ್ರೇಮಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ನಡೆದಿದ್ದವು. ಇದೆಲ್ಲಾ ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಮೌನವನ್ನು ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *