ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಕಿಂಗ್ಸ್‌ಗೆ 20 ರನ್‌ಗಳ ಜಯ

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವೆ ನಡೆದ ಐಪಿಎಲ್ (IPL 2024) ಪಂದ್ಯದಲ್ಲಿ ಸಿಎಸ್‌ಕೆ ತಂಡವು 20  ರನ್‌ ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 206 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 207 ರನ್‌ಗಳ ಗುರಿ ನೀಡಿತು.

 

ಸಿಎಸ್‌ಕೆ ತಂಡದಿಂದ ಓಪನಿಂಗ್ ಆಟಗಾರರಾಗಿ ಅಜಿಂಕ್ಯಾ ರಹಾನೆ ಮತ್ತು ರಚಿನ್ ರವೀಂದ್ರ ಕಣಕ್ಕಿಳಿದಿದ್ದರು. ಕೇವಲ 8 ಎಸೆತಗಳಿಗೆ 5 ರನ್ ಗಳಿಸಿ ರಹಾನೆ ಔಟಾಗುವ ಮೂಲಕ ಸಿಎಸ್‌ಕೆ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸ್‌ಗೆ ಎಂಟ್ರಿಕೊಟ್ಟ ಸಿಎಸ್‌ಕೆ ತಂಡದ ನಾಯಕ ಋತುರಾಜ್ ಗಾಯಕ್ವಾಡ್ 40 ಬಾಲ್‌ಗಳಿಗೆ 69 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. ರಚಿನ್ ರವೀಂದ್ರ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರುತುರಾಜ್, ಶಿವಂ ದುಬೆಯೊಂದಿಗೆ 90 ರನ್‌ಗಳ ಬೃಹತ್ ಜೊತೆಯಾಟ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಶಿವಂ ದುಬೆ 28 ಎಸೆತಗಳಿಗೆ ಅರ್ಧಶತಕ ಸಿಡಿಸಿ ಒಟ್ಟು 33 ಎಸೆತಗಳಿಗೆ 66 ರನ್‌ಗಳ ಕಲೆ ಹಾಕಿದರು.

 

ಮುಂಬೈ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ತಂಡದ ಪರ ನಾಯಕ ರುತುರಾಜ್ 69 ರನ್ ಹಾಗೂ ಶಿವಂ ದುಬೆ 66 ರನ್ ಸಿಡಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಮಿಚೆಲ್ ಬಳಿಕ ಕ್ರೀಸ್‌ಗೆ ಮರಳಿದ ಧೋನಿ ಕೊನೆಯ ಓವರ್‌ನಲ್ಲಿ 3 ಸಿಕ್ಸ್ ಬಾರಿಸುವ ಮೂಲಕ 4 ಬಾಲ್‌ಗಳಿಗೆ 20 ರನ್ ಗಳಿಸಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

 

207 ರನ್‌ಗಳ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಹೀನಾಯ ಸೋಲು ಕಂಡಿತು. ಮುಂಬೈ ತಂಡದಿಂದ ಆರಂಭಿಕ ಆಟಗಾರರಾಗಿ ಇಶನ್ ಕಿಶನ್ ಹಾಗೂ ರೋಹಿತ್ ಶರ್ಮಾ ಆಡಿದರು. ಇಶನ್ ಕಿಶನ್ 15 ಎಸೆತಗಳಿಗೆ 23 ರನ್ ಗಳಿಸಿ ಔಟಾದರೆ, ಸೂರ್ಯ ಕುಮಾರ್ ಯಾದವ್ ಕೇವಲ 2 ಎಸೆತಗಳಿಗೆ ಯಾವುದೇ ರನ್‌ಗಳಿಸದೇ ಪೆವಿಲಿಯನ್‌ಗೆ ಮರಳಿದರು. ರೋಹಿತ್ ಶರ್ಮಾ 61 ಎಸೆತಗಳಿಗೆ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರು. ಈ ಮೂಲಕ ರೋಹಿತ್ ಶರ್ಮಾ 63 ಬಾಲ್‌ಗಳಿಗೆ 105 ರನ್ ಸಿಡಿಸಿದರು.

ತಿಲಕ್ 20 ಎಸೆತಗಳಿಗೆ 31 ರನ್‌ಗಳಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ರೋಹಿತ್ ಶರ್ಮಾ ಜೊತೆ ತಿಲಕ್ 60 ರನ್‌ಗಳ ಜೊತೆಯಾಟ ನಡೆಸಿದರು. ತುಷಾರ್ ದೇಶಪಾಂಡೆ ಬೌಲಿಂಗ್‌ನಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಆರು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಔಟಾದರು. ಡೇವಿಡ್ 5 ಬಾಲ್‌ಗಳಲ್ಲಿ 13 ರನ್ ಗಳಿಸಿ ತಮ್ಮ ಆಟ ಮುಗಿಸಿದರು. ಪತಿರಾನ ತಮ್ಮ ಬೌಲಿಂಗ್ ಮೂಲಕ ರೊಮಾರಿಯೊ ಶೆಫರ್ಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 6ನೇ ವಿಕೆಟ್ ಕಿತ್ತರು. ಬಳಿಕ ಬಂದ ನಬೀ 7 ಎಸೆತಗಳಿಗೆ 4 ರನ್ ಗಳಿಸಿ ಪಂದ್ಯವನ್ನು ಮುಕ್ತಾಯಗೊಳಿಸಿದರು.