ಭದ್ರತೆಯ ನಡುವೆಯೂ ಧೋನಿಯ ಕಾಲಿಗೆ ನಮಸ್ಕರಿಸಿದ ಅಭಿಮಾನಿ – ವಿಡಿಯೋ ನೋಡಿ

ಪುಣೆ: ಇಲ್ಲಿ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅಭಿಮಾನಿಯೊಬ್ಬ ಬಿಗಿ ಭದ್ರತೆಯ ನಡುವೆಯೂ ಮೈದಾನಕ್ಕೆ ಪ್ರವೇಶಿಸಿ ಎಂಎಸ್ ಧೋನಿ ಕಾಲಿಗೆ ನಮಸ್ಕರಿಸಿದ ಘಟನೆ ನಡೆದಿದೆ.

ಧೋನಿ ಅವರಿಗೆ ವಿಶ್ವಾದ್ಯಂತ ಹಲವು ಅಭಿಮಾನಿಗಳಿದ್ದು, ಹಲವರು ಧೋನಿಯವರ ಕೂಲ್ ಆಟಕ್ಕೆ ಬೌಲ್ಡ್ ಆಗಿದ್ದಾರೆ. ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಚೆನ್ನೈ ತಂಡ ಕಮ್ ಬ್ಯಾಕ್ ಮಾಡಿದ ಬಳಿಕ ಅಭಿಮಾನಿಗಳ ಸಂತೋಷ ಇಮ್ಮಡಿಯಾಗಿದೆ.

ಚೆನ್ನೈ ಬ್ಯಾಟಿಂಗ್ ನಡೆಸುತ್ತಿದ್ದ 12 ಓವರ್ ನಲ್ಲಿ ಸುರೇಶ್ ರೈನಾ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಡೆದಿದ್ದರು, ಈ ವೇಳೆ ಬ್ಯಾಟಿಂಗ್ ಇಳಿದ ಧೋನಿ ಅವರ ಬಳಿ ಅಭಿಮಾನಿಯೊಬ್ಬ ಓಡಿ ಬಂದು ಕಾಲಿಗೆ ನಮಸ್ಕರಿಸಿದ. ಅನಿರೀಕ್ಷಿತ ಘಟನೆಯಿಂದ ಸ್ವಲ್ಪವೂ ವಿಚಲಿತರಾಗದ ಧೋನಿ ನಗುತ್ತಲೇ ಮುಂದೇ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಶತಕ ಸಿಡಿಸಿದ ವ್ಯಾಟ್ಸನ್ ಚೆನ್ನೈ 64 ರನ್ ಗಳ ಭಾರಿ ಅಂತರದ ಗೆಲವು ಪಡೆಯಲು ಪ್ರಮುಖ ಪಾತ್ರವಹಿಸಿದರು. ಕೇವಲ 57 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ 9 ಬೌಂಡರಿ ಹಾಗೂ 6 ಸಿಕ್ಸರ್ ಗಳ ನೆರವಿನಿಂದ 106 ರನ್ ಸಿಡಿಸಿದರು. ಈ ಮೂಲಕ 2018 ರ ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

ಕಾವೇರಿ ನೀರಿನ ಹಂಚಿಕೆ ವಿವಾದ ಕುರಿತು ತಮಿಳುನಾಡಿನಲ್ಲಿ ಐಪಿಎಲ್ ಆಟಕ್ಕೆ ವಿರೋಧ ವ್ಯಕ್ತವಾದ ಕಾರಣ ಚೆನ್ನೈ ಪಂದ್ಯಗಳನ್ನು ಪುಣೆಗೆ ವರ್ಗಾವಣೆ ಮಾಡಲಾಗಿತ್ತು. ಚೆನ್ನೈ ತಂಡದ ಅಭಿಮಾನಿಗಳ ಮನವಿ ಮೇರೆಗೆ ಸಿಎಸ್‍ಕೆ ತಂಡ ಪ್ರಾಂಚೈಸಿಗಳು ಅಭಿಮಾನಿಗಳು ಪುಣೆಗೆ ಬರಲು ವಿಶೇಷ ರೈಲು ಸೇವೆಯನ್ನು ನೀಡಿದ್ದರು.

Comments

Leave a Reply

Your email address will not be published. Required fields are marked *