ಬೆಂಗಳೂರು: ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಅಜಯ್ ಸಿಂಗ್ ಪದಗ್ರಹಣ ಸಮಾರಂಭಕ್ಕೆ ಜೆಡಿಎಸ್ ನಾಯಕರ ಗೈರಿಗೆ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಸಮರ್ಥನೆ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡಿದರೆ ಹೀಗೆ ಆಗುತ್ತದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನು ಓದಿ: ನಮಗೆ ಯಾರು ಅನಿವಾರ್ಯ ಇಲ್ಲ, ನಾವು ಎಲ್ಲರಿಗೂ ಅನಿವಾರ್ಯ – ಎಲ್ಲದ್ದಕ್ಕೂ ನಾವು ರೆಡಿ ಎಂದ ಸುರೇಶ್ ಗೌಡ

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಮ್ಮ ಮೂಲವನ್ನು ಗಮನಿಸಬೇಕು. ಸಿಎಂ ಕುಮಾರಸ್ವಾಮಿ ಅವರು ಮೆಚ್ಯೂರಿಟಿ ಇರುವುದಕ್ಕೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿರುವುದು. ಹಾದಿ ಬೀದಿಯಲ್ಲಿ ನಿಂತು ಮಾತನಾಡುವುದನ್ನು ಬಿಡಬೇಕು. ಕಾಂಗ್ರೆಸ್ಸಿನವರ ವರ್ತನೆಯಿಂದಾಗಿ ನಾವು ಯಾರೂ ಅಜಯ್ ಸಿಂಗ್ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಅಜಯ್ ಸಿಂಗ್ ನಮಗೆ ಆತ್ಮೀಯರು. ಆದರೆ ಕಾಂಗ್ರೆಸ್‍ನವರ ಹೇಳಿಕೆಯಿಂದಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಿ ಹಾಕಿದ್ದೇವೆ. ಪದೇ ಪದೇ ಕೆಣಕಿದರೆ ಉತ್ತರ ಕೊಡಬೇಕಾಗುತ್ತದೆ. ಕಾಂಗ್ರೆಸ್‍ನವರು ಈ ವರ್ತನೆಯನ್ನು ಬಿಡಬೇಕು ಎಂದು ಸಚಿವರು ಹೇಳಿದ್ದಾರೆ.
ಹಿಂದೆ ಬಿಜೆಪಿ ಜೊತೆ ಸೇರಿ ಉತ್ತಮ ಆಡಳಿತ ನೀಡಿದ್ದೇವೆ. ಕೃಷ್ಣದೇವರಾಯನ ಆಡಳಿತ ಮರುಕಳಿಸಿದಂತಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಹೇಗಿತ್ತು ಎಂಬುದನ್ನು ಹೇಳಿದ್ದೇನೆ ಅಷ್ಟೇ. ಈಗ ಬಿಜೆಪಿ ಜೊತೆ ಹೋಗುತ್ತೇವೆ ಎಂದಿಲ್ಲ ಎಂದು ಪುಟ್ಟರಾಜು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಅನಿವಾರ್ಯವಾಗಿ ಶರಣಾಗಿದ್ದೇವೆ, ಕಳೆದ 20 ವರ್ಷಗಳಲ್ಲಿ ದಿ ಬೆಸ್ಟ್ ಸಿಎಂ ಅಂದ್ರೆ ಸಿದ್ದರಾಮಯ್ಯ: ರಾಯರೆಡ್ಡಿ

ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ ಪ್ರತಿಕ್ರಿಯಿಸಿ, ಕಾಂಗ್ರೆಸ್ ಕೆಳಹಂತದ ನಾಯಕರನ್ನು ಮೊದಲು ಹದ್ದುಬಸ್ತಿನಲ್ಲಿಡಬೇಕು. ಮನಸ್ಸಿಗೆ ಬಂದಂತೆ ಮಾತನಾಡಬಾರದು. ಸರ್ಕಾರದ ಯಾವುದೇ ಬೆಳವಣಿಗೆಗೆ ಸಂಬಂಧಿಸಿದಂತೆ ಮಾತನಾಡಲು ಜೆಡಿಎಸ್ ವರಿಷ್ಠ ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಇದ್ದಾರೆ. ತಮ್ಮ ನಾಯಕರನ್ನು ಖುಷಿ ಪಡಿಸಲು ಕಾಂಗ್ರೆಸ್ ಶಾಸಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇತ್ತೀಚೆಗಷ್ಟೆ ಶಾಸಕ ಸೋಮಶೇಖರ್ ಅವರು ಬೆಂಗಳೂರಿಗೆ ಯಾವುದೇ ಅಭಿವೃದ್ಧಿ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಹಾಗಾದರೆ ಮೆಟ್ರೋ ಎರಡನೇ ಹಂತಕ್ಕೆ ಕ್ಲಿಯರೆನ್ಸ್ ಕೊಟ್ಟಿದ್ದು ಯಾರು? ಎಲಿವೇಟೆಡ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಯಾರು? ದೇಶದಲ್ಲೇ ಕುಮಾರಸ್ವಾಮಿ ಅವರು ಅತ್ಯುತ್ತಮ ಮುಖ್ಯಮಂತ್ರಿ ಅಂತಾ ಹೊಗಳುತ್ತಿರುವಾಗ ಇವರು ಏನೇನೋ ಹೇಳಿಕೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.
https://www.youtube.com/watch?v=jB2geNxJJtU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply