ಹುತಾತ್ಮ ಯೋಧನ ಪತ್ನಿಗೆ ಬಂದಿದ್ದ 8 ಲಕ್ಷ ರೂ ದೋಚಿದ ನೀಚ!

ಭೋಪಾಲ್: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವಿನಿಂದ ಇಡೀ ದೇಶವೇ ಬೇಸರದಲ್ಲಿರುವಾದ ಮಧ್ಯಪ್ರದೇಶದಲ್ಲಿ ಹುತಾತ್ಮ ಯೋಧನ ಪತ್ನಿಗೆ ಪರಿಹಾರ ರೂಪದಲ್ಲಿ ಬಂದಿದ್ದ ಲಕ್ಷಾಂತರ ರೂ. ಹಣವನ್ನು ವ್ಯಕ್ತಿಯೋರ್ವ ಮೋಸದಿಂದ ದೋಚಿ ಪರಾರಿಯಾಗಿ ವಿಕೃತಿ ಮೆರೆದಿದ್ದಾನೆ.

ಸೆಹೋರ್‍ನ ಶಹಾಪುರ ಗ್ರಾಮ ನಿವಾಸಿ ಓಂ ಪ್ರಕಾಶ್ ಮರ್ದಾನಿಯಾ ಸೇರಿದಂತೆ ಐವರು ಸಿಆರ್‌ಪಿಎಫ್
ಯೋಧರು 2013ರಲ್ಲಿ ಶ್ರೀನಗರದ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಮರ್ದಾನಿಯಾ ಮತ್ತು ಕೋಮಲ್ ಬಾಯ್ ದಂಪತಿಗೆ 7 ಮತ್ತು 5 ವರ್ಷದ ಮಕ್ಕಳಿದ್ದು, ಭಾರತೀಯ ಸೇನೆಯಿಂದ ಹುತಾತ್ಮ ಯೋಧ ಮರ್ದಾನಿಯಾ ಪತ್ನಿಗೆ ಪರಿಹಾರ ಧನವನ್ನು ನೀಡಲಾಗಿತ್ತು. ಆದರೆ ವ್ಯಕ್ತಿಯೋರ್ವ ಯೋಧನ ಪತ್ನಿಯನ್ನು ವಂಚಿಸಿ ಆಕೆಯ ಬಳಿಯಿದ್ದ ಸುಮಾರು 8 ಲಕ್ಷ ರೂ. ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ಫೆಬ್ರವರಿ 11ರಂದು ವ್ಯಕ್ತಿಯೊಬ್ಬ ನನ್ನ ಹೆಸರು ಮಿಶ್ರಿ ಲಾಲ್ ಮೀನಾ. ನಾನೊಬ್ಬ ಯೋಧ, ಸೇನೆ ಕಡೆಯಿಂದ ಬಂದಿದ್ದೇನೆ ಎಂದು ನಮ್ಮ ಮನೆಗೆ ಬಂದಿದ್ದನು. ಬಳಿಕ ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸುವುದು ನಮ್ಮ ಸಿಆರ್‌ಪಿಎಫ್ನಲ್ಲಿ ವಾಡಿಕೆ. ಆದರಿಂದ ಸಿಆರ್‍ಪಿಎಫ್ ನಿಮಗೆ ಮತ್ತೆ 34 ಲಕ್ಷ ಪರಿಹಾರ ಕಳುಹಿಸಲಿದೆ. ಅದಕ್ಕಿಂತ ಮೊದಲು ನೀಮಗೆ ಈಗಾಗಲೇ ನೀಡಿರುವ 8 ಲಕ್ಷ ರೂಪಾಯಿಯನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ತೆಗೆಯಿರಿ ಎಂದು ನನ್ನ ಮನವೊಲಿಸಿ ಬ್ಯಾಂಕ್‍ಗೆ ಕರೆದೊಯ್ದನು. ನಂತರ ಅಲ್ಲಿ ಹಣವನ್ನು ತೆಗೆದುಕೊಂಡು ನಾನು ಹೊರಬಂದಾಗ ನನ್ನ ಬಳಿಯಿದ್ದ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಹುತಾತ್ಮ ಯೋಧನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಖದೀಮ ಈ ವಂಚನೆಯನ್ನು ಮಾಡಲು ಸಿಆರ್‌ಪಿಎಫ್ ಹೆಸರನ್ನು ಬಳಸಿಕೊಂಡಿರುವುದರಿಂದ, ಸಿಆರ್‍ಪಿಎಫ್ ಕೂಡ ತನಿಖೆಯಲ್ಲಿ ನಮಗೆ ಸಹಾಯ ಮಾಡುತ್ತಿದೆ. ಆರೋಪಿಗೆ ಮಹಿಳೆಯ ಬ್ಯಾಂಕ್ ಖಾತೆಯಲ್ಲಿ ಹಣವಿರುವ ವಿಚಾರ ಗೊತ್ತಿದೆ. ಅಲ್ಲದೆ ಸಿಆರ್‌ಪಿಎಫ್ ಹುತಾತ್ಮರ ಕುಟುಂಬಕ್ಕೆ ಆಗಾಗ ಭೇಟಿ ನೀಡುವ ಬಗ್ಗೆ ಕೂಡ ಅವನಿಗೆ ಮಾಹಿತಿ ಇದೆ. ಆದರಿಂದ ಈ ಕೃತ್ಯವೆಸೆಗಿದ್ದಾನೆ. ಎಲ್ಲ ದಿಕ್ಕುಗಳಿಂದಲೂ ನಾವು ತನಿಖೆ ನಡೆಸುತ್ತಿದ್ದೇವೆ. ಸದ್ಯ ತನಿಖೆಯಲ್ಲಿ ಪ್ರಗತಿ ಕಾಣುತ್ತಿದ್ದು, ಆದಷ್ಟು ಬೇಗ ನಾವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *