ಗ್ರಾಮಸ್ಥರಿಂದ ಬೃಹತ್ ಗಾತ್ರದ ಮೊಸಳೆ ಸೆರೆ!

ಬೆಳಗಾವಿ(ಚಿಕ್ಕೋಡಿ): ಆಹಾರ ಅರಸಿ ಕಬ್ಬಿನ ಗದ್ದೆಗೆ ನುಗ್ಗಿದ್ದ ಬೃಹತ್ ಗಾತ್ರದ ಮೊಸಳೆಯೊಂದನ್ನು ಅಥಣಿ ತಾಲೂಕಿನ ಹುಲಗಬಾಳ ಗ್ರಾಮಸ್ಥರು ಹಿಡಿದಿದ್ದಾರೆ.

ಕೃಷ್ಣ ನದಿ ತೀರದ ಹುಲಗಬಾಳ ಗ್ರಾಮದ ಹಿರೇಮಠ ತೋಟಕ್ಕೆ ಆಹಾರ ಅರಸಿ ನುಗ್ಗಿಬಂದ ದೊಡ್ಡ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ್, ಸಪ್ತಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿರುವ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೇ ಪರದಾಡುವಂತಾಗಿದೆ. ನದಿಯ ಸುತ್ತಮುತ್ತಲ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ.

ನೀರಿಲ್ಲದೆ ಕೃಷ್ಣ ನದಿ ಬತ್ತಿ ಹೋಗಿದ್ದು ಒಂದು ಕಡೆ ಸಾರ್ವಜನಿಕರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ನೀರಿನಲ್ಲಿ ಇರಬೇಕಾದ ಮೊಸಳೆಗಳು ಜಮೀನುಗಳಲ್ಲಿ ಆಹಾರ ಅರಸಿ ಬರುತ್ತಿದ್ದು, ನದಿ ತೀರದ ತೋಟದ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.

Comments

Leave a Reply

Your email address will not be published. Required fields are marked *