ಅಪರಾಧಿಗಳು ನಿರ್ಭೀತಿಯಿಂದ ಓಡಾಟ, ಸಂತ್ರಸ್ತರ ಪರದಾಟ: ದ್ರೌಪದಿ ಮುರ್ಮು ಕಳವಳ

ನವದೆಹಲಿ: ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುವುದು ಹಾಗೂ ಸಂತ್ರಸ್ತರು ಅಪರಾಧಗಳನ್ನು ಮಾಡಿದಂತೆ ಭಯದಿಂದ ಬದುಕುವುದು ನಮ್ಮ ಸಾಮಾಜಿಕ ಜೀವನದ ದುಃಖದ ಅಂಶವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತ್ ಮಂಟಪದಲ್ಲಿ ನಡೆದ ಸುಪ್ರೀಂ ಕೋರ್ಟ್‌ನ (Supreme Court) 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಯೋಜಿಸಲಾದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಈ ವೇಳೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ, ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟರ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಹತ್ತಾರು ಪ್ರಕರಣಗಳು ಭಾರತ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಕುರಿತು ಕೂಲಂಕಷವಾಗಿ ಮರುಪರಿಶೀಲಿಸುವ ಅಗತ್ಯತೆಯನ್ನು ಹುಟ್ಟುಹಾಕಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇರಳ ರಾಜಕಾರಣದಲ್ಲೂ ಕಾಸ್ಟಿಂಗ್ ಕೌಚ್ ಕೋಲಾಹಲ; ಪಕ್ಷದ ನಾಯಕರಿಂದ ಕಿರುಕುಳ – ಕಾಂಗ್ರೆಸ್ ನಾಯಕಿ ರೋಸ್‌ಬೆಲ್ ಬಾಂಬ್‌

ಇತ್ತೀಚಿನ ದಿನಗಳಲ್ಲಿ ಸಮಯೋಚಿತ ಆಡಳಿತ, ಮೂಲಸೌಕರ್ಯ, ಸೌಲಭ್ಯಗಳು, ತರಬೇತಿ ಮತ್ತು ಮಾನವ ಸಂಪನ್ಮೂಲಗಳ ಸುಧಾರಣೆ ಕಂಡುಬಂದಿದೆ ಎಂದು ನನಗೆ ಹೇಳಲಾಗುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಆಯ್ಕೆ ಸಮಿತಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಲು ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವೇಳೆ ಮಾತಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಕೇಸ್ ಮ್ಯಾನೇಜ್ಮೆಂಟ್ ಮೂಲಕ ಬಾಕಿ ಪ್ರಕರಣಗಳನ್ನು ಕಡಿಮೆ ಮಾಡಲು ನಾವು ಕ್ರಿಯಾ ಯೋಜನೆಯನ್ನು ರೂಪಿಸಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ನ ಧ್ವಜ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್‌ಐಆರ್‌