ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

– ಪತ್ರಿಕೆಯಲ್ಲಿ ಮಾಹಿತಿ ಪಬ್ಲಿಷ್ ಮಾಡಲು 60 ಲಕ್ಷ ರೂ. ವೆಚ್ಚ

ತಿರುವನಂತಪುರಂ: ಬಿಜೆಪಿ ಅಭ್ಯರ್ಥಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಣೆಯನ್ನು ಪತ್ರಿಕೆಯೊಂದರ ನಾಲ್ಕು ಪುಟಗಳಲ್ಲಿ ಮುದ್ರಿಸಲಾಗಿದೆ. ಇದು ಪತ್ರಿಕೆ ತೆರೆದು ನೋಡಿದ ಓದುಗರಲ್ಲಿ ಅಚ್ಚರಿ ಮೂಡಿಸಿದೆ.

ಕೇರಳದ ಪಥನಂತಿಟ್ಟಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ 204 ಕ್ರಿಮಿನಲ್ ಕೇಸ್ ದಾಖಲಾಗಿವೆ. ಈ ಕುರಿತು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಮತದಾರರ ಜಾಗೃತಿ ಉದ್ದೇಶದಿಂದ ಚುನಾವಣಾ ಆಯೋಗವು ಮೂರು ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಕುರಿತು ಜಾಹೀರಾತು ನೀಡಬೇಕು. ಹೀಗಾಗಿ ಪ್ರತಿಕೆಯೊಂದರ ಪಥನಂತಿಟ್ಟಿಯ ಆವೃತ್ತಿಯಲ್ಲಿ ಕೆ.ಸುರೇಂದ್ರನ್ ಅವರು ಎದುರಿಸುತ್ತಿರುವ ಕ್ರಿಮಿನಲ್ ಕೇಸ್‍ಗಳ ಕುರಿತು ಜಾಹೀರಾತು ನೀಡಲಾಗಿತ್ತು. ಇದನ್ನು ಮುದ್ರಿಸಲು ಬರೋಬ್ಬರಿ ನಾಲ್ಕು ಪುಟಗಳೇ ಬೇಕಾಯಿತು. ಗುರುವಾರ ಪತ್ರಿಕೆ ತೆರೆದು ನೋಡಿದ ಓದುಗರು ಯಾವುದೋ ಟೆಂಡರ್, ಕಾಮಗಾರಿ ಮಾಹಿತಿ ಎಂದು ತಿಳಿದಿದ್ದರು. ಬಳಿಕ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಮಾಹಿತಿ ಎಂದು ತಿಳಿದಾಗ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ ಇರುವ ಪ್ರಕರಣಗಳಲ್ಲಿ ಶೇ.90 ರಷ್ಟು ಶಬರಿಮಲೆ ಹೋರಾಟಕ್ಕೆ ಸಂಬಂಧಿಸಿವೆ. ಪ್ರತಿಕೆಯಲ್ಲಿ ಪಬ್ಲಿಷ್ ಆಗಿರುವ ನಾಲ್ಕು ಪುಟಗಳ ಜಾಹೀರಾತಿಗೆ 20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಕನಿಷ್ಠ ಮೂರು ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ವಿರುದ್ಧ ಇರುವ ಪ್ರಕರಣಗಳ ಕುರಿತು ಪಬ್ಲಿಷ್ ಮಾಡಬೇಕು. ಈ ಮೂಲಕ ಮೂರು ಪತ್ರಿಕೆಗಳಿಗೆ ಜಾಹೀರಾತು ನೀಡಿದ ವೆಚ್ಚ 60 ಲಕ್ಷ ರೂ. ಆಗಿದೆ.

Comments

Leave a Reply

Your email address will not be published. Required fields are marked *