ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಟೀಕಿಸಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ವಿಶ್ವಸಂಸ್ಥೆ ನಿರ್ಣಯದ ಪ್ರಕಾರ ಕಾಶ್ಮೀರಿಗಳಿಗೆ ಅವರ ಹಕ್ಕುಗಳನ್ನು ನೀಡಬೇಕು. ನಮ್ಮಲ್ಲೆರಂತೆಯೇ ಅವರಿಗೂ ಸ್ವಾತಂತ್ರ್ಯದ ಹಕ್ಕು ನೀಡಬೇಕು. ವಿಶ್ವಸಂಸ್ಥೆಯನ್ನು ರಚಿಸಿದ್ದು ಯಾಕೆ ಮತ್ತು ಅದು ಯಾಕೆ ನಿದ್ರಿಸುತ್ತಿದೆ? ಕಾಶ್ಮೀರದಲ್ಲಿ ಮಾನವೀಯತೆಯ ವಿರುದ್ಧ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣವನ್ನು ಗಮನಿಸಬೇಕು. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಬೇಕು ಎಂದು ಶಾಹೀದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರು ಗೌತಮ್ ಗಂಭೀರ್ ಅವರು, ಶಾಹೀದ್ ಆಫ್ರಿದಿ ಅವರು ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲಿ ಅಪ್ರಚೋದಿತ ಆಕ್ರಮಣ ಹಾಗೂ ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿದೆ. ಇದನ್ನು ಉಲ್ಲೇಖಿಸಿದ್ದಕ್ಕೆ ನಾವರನ್ನು ಶ್ಲಾಘಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇವೆಲ್ಲವೂ ನಡೆಯುತ್ತಿದೆ ಎಂದು ಹೇಳುವುದನ್ನು ಆಫ್ರಿದಿ ಮರೆತಿದ್ದಾರೆ. ಚಿಂತಿಸಬೇಡಿ, ನಾವು ಪಿಓಕೆ ಇತ್ಯರ್ಥಗೊಳಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

Comments

Leave a Reply

Your email address will not be published. Required fields are marked *