10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

-ರವೀಶ್. ಹೆಚ್.ಎಸ್, ಪೊಲಿಟಿಕಲ್ ‌ಬ್ಯೂರೋ ಚೀಫ್, ಪಬ್ಲಿಕ್ ಟಿವಿ

ಇಬ್ಬರು ಕ್ರಿಕೆಟ್ ಲೆಜೆಂಡ್‌ಗಳು ಮೈದಾನದಲ್ಲಿದ್ದರೆ ಸಾಕು ರೋಚಕ.. ರೋಮಾಂಚನ. ಬೌಂಡರಿ ಗೆರೆ ದಾಟಿಸಲೇಬೇಕು ಅಂತಾ ಒಬ್ಬಾತ ಕ್ರೀಸ್‌ನಲ್ಲಿದ್ದರೆ, ಕ್ರೀಸ್‌ನಿಂದಲೇ ಬಹುಬೇಗ ಕಳುಹಿಸಬೇಕು ಅಂತಾ ಬಾಲ್ ಎಸೆಯುತ್ತಿದ್ದ ಇನ್ನೊಬ್ಬ. ಆ ಇಬ್ಬರು ಮೈದಾನದ ಎದುರಾಳಿಗಳು ವಿಶ್ವ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರು. ಅವರೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಂಡ್ ಮ್ಯಾಜಿಕಲ್ ಬೌಲರ್ ಶೇನ್ ವಾರ್ನ್. ಮೈದಾನದಲ್ಲಿ ಎದುರಾಳಿಗಳಾದ್ರೆ ಹೊರಗೆ ಸ್ನೇಹ ಜೀವಿಗಳು. ಇಬ್ಬರ ನಡುವಿನ ಅಸಲಿ ಆಟ ಹೇಗಿತ್ತು ಅನ್ನೋದರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಅದು 1992, ಜನವರಿ 2 ರಿಂದ 6. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ- ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಸರಣಿ‌ಯ ಮೂರನೇ ಪಂದ್ಯ. ಮ್ಯಾಜಿಕ್ ಸ್ಪಿನ್ನರ್, ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆಯ ಆರಂಭದ ದಿನಗಳು‌ ಇವು. ಭಾರತದಲ್ಲಿ ಮಾಸ್ಟರ್ ಬ್ಲಾಸ್ಟರ್ ಎಂಬ ಧ್ರುವತಾರೆ ಮಿನುಗುವ ಆರಂಭದ ಕಾಲ ಅದು. ಮೊದಲ ಟೆಸ್ಟ್ ಆಡಲು ಮೈದಾನಕ್ಕೆ ಇಳಿದ ಯುವಕ ಶೇನ್ ವಾರ್ನ್, ಸಚಿನ್ ಬಗ್ಗೆ ಮೊದಲ ಹೊಡೆತ ತಿಂದದ್ದು ಸಿಡ್ನಿ ಮೈದಾನದಲ್ಲೇ ಎನ್ನುವುದು ಇತಿಹಾಸ. ‌

5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಗಿ ಶೇನ್ ವಾರ್ನ್ ಪಾದಾರ್ಪಣೆ ಮಾಡ್ತಾರೆ. ಆ ಪಂದ್ಯದಲ್ಲಿ ಆಟದ ಬಗ್ಗೆ ಗಮನ‌ ಕೊಡಬೇಕಾದ ಯುವಕ‌ ವಾರ್ನ್, ಸಚಿನ್ ನೋಡಿ 10 ವರ್ಷದ ಬಾಲಕ ಅಂತಾ ಛೇಡಿಸ್ತಾರೆ.‌ ಆದರೆ ಪರಿಣಾಮ‌ ಗೊತ್ತಾಗಿದ್ದು ಮೊದಲ ಇನ್ನಿಂಗ್ಸ್ ಮುಗಿದ ಮೇಲೆ. ಮೂರನೇ ಪಂದ್ಯದ‌ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ಸ್ಕೋರ್ 145. ಶೇನ್ ವಾರ್ನ್ 45 ಓವರ್ ಬೌಲಿಂಗ್ ಮಾಡಿ‌ 150 ರನ್ ಕೊಟ್ಟು ಪಡೆದಿದ್ದು ಬರೀ 1 ವಿಕೆಟ್. ರವಿಶಾಸ್ತ್ರಿ‌ ಡಬ್ಬಲ್ ಸೆಂಚುರಿ ಮಾಡಿ ಬಿಟ್ಟು ಕೊಟ್ಟ ವಿಕೆಟ್ ಅದು.

ಅವತ್ತು ಸಚಿನ್ ಕೊಟ್ಟ ಹೊಡೆತಕ್ಕೆ ಶೇನ್ ವಾರ್ನ್ ಪತರಗುಟ್ಟಿ ಹೋಗ್ತಾರೆ.‌ ಅಲ್ಲಿಂದ ಶುರುವಾಗಿದ್ದು ಸಚಿನ್, ವಾರ್ನ್ ನಡುವಿನ ಸ್ನೇಹ, ಸಾಂಪ್ರಾದಾಯಿಕ ಎದುರಾಳಿ ಸ್ಪರ್ಧೆಯ ಪೈಪೋಟಿ. ನಾಲ್ಕನೇ ಟೆಸ್ಟ್‌ನಲ್ಲಿ ಶೇನ್ ವಾರ್ನ್ ಯಾವುದೇ ವಿಕೆಟ್ ಪಡೆಯದೇ ಹೆಚ್ಚು ರನ್ ಕೊಡ್ತಾರೆ.‌ ಆಗಲೇ ಆಸ್ಟ್ರೇಲಿಯಾ ಶೇನ್ ವಾರ್ನ್ ಅವರನ್ನು 5ನೇ ಟೆಸ್ಟ್‌ಗೆ ಕಣಕ್ಕಿಳಿಸದೇ ಕೂರಿಸ್ತಾರೆ. ತೆಂಡೂಲ್ಕರ್ 10 ವರ್ಷದ ಬಾಲಕ ಎಂದಿದ್ದನ್ನ ವಾರ್ನ್ ಅವರೇ ಪಂದ್ಯವೊಂದರ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ತಾರೆ.

ಇನ್ನು ಸಚಿನ್, ಶೇನ್ ವಾರ್ನ್ ಮೈದಾನದಲ್ಲಿ ಎದುರಾಳಿ‌‌ಗಳು.‌ ಮೈದಾನದಲ್ಲಿ ಸಚಿನ್ ಕಟ್ಟಿ ಹಾಕಲು ಶೇನ್ ವಾರ್ನ್ ಮಾಡುವ ಮ್ಯಾಜಿಕ್‌ಗಳಿಗೇನೂ ಕಮ್ಮಿ ಇರಲಿಲ್ಲ. ಶೇನ್ ವಾರ್ನ್ ಮತ್ತು ಸಚಿನ್ ನಡುವಿನ ಆ ಟಾಪ್‌ 5 ಮ್ಯಾಚ್‌ಗಳಂತೂ ರೋಚಕವಾಗಿರುತ್ತಿದ್ದವು.

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ, ಮಾರ್ಚ್ 1998 1st ಟೆಸ್ಟ್ ಮ್ಯಾಚ್, ಚೆನ್ನೈ . ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್‌ 4 ರನ್ ಇದ್ದಾಗಲೇ ಶೇನ್ ವಾರ್ನ್ ವಿಕೆಟ್ ಕಬಳಿಸ್ತಾರೆ. ಅದೇ ಮುಯ್ಯಿಗೆ ಮುಯ್ಯಿ ಎಂಬಂತೆ ಎರಡನೇ ಇನ್ನಿಂಗ್ಸ್‌ನಲ್ಲಿ ಸಚಿನ್ not out 155 ರನ್ ಬಾರಿಸಿ ಮ್ಯಾನ್ ಆಫ್ ದಿ ಮ್ಯಾಚ್ ಮುಡಿಗೇರಿಸಿಕೊಳ್ತಾರೆ. ಈ ಪಂದ್ಯ ಸಚಿನ್ ವರ್ಸಸ್ ವಾರ್ನ್ ಎಂಬಂತಾಗಿತ್ತು.

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ, 1998, ಅದು ಶಾರ್ಜಾದಲ್ಲಿ ನಡೆದ ಕೊಕೋಕೋಲಾ ಕಪ್. ಫೈನಲ್ ಪಂದ್ಯದಲ್ಲಿ ಶೇನ್ ವಾರ್ನ್‌ಗೆ ಜ್ವರ ಬಂದು ಕನಸಲ್ಲಿ ಬರುವ ಥರಾ ಸಚಿನ್ ರನ್‌ ಹೊಡೆದರು. ಆ ಪಂದ್ಯದಲ್ಲಿ ಸಚಿನ್ 131 ಬಾಲ್‌ಗೆ 134 ರನ್ ಸಿಡಿಸಿದರೆ, ಶೇನ್ ವಾರ್ನ್ 10 ಓವರ್‌ಗಳನ್ನು ಬೌಲ್ ಮಾಡಿ ವಿಕೆಟ್ ಪಡೆಯದೇ 61 ರನ್ ಕೊಟ್ಟಿದ್ದರು. ಆ ಕಾಲಕ್ಕೆ 61 ತುಂಬಾ ಕಾಸ್ಟ್ಲೀ ಆಗಿತ್ತು.  ಇದನ್ನೂ ಓದಿ:  ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್

ಇನ್ನುಳಿದಂತೆ ಡಿಸೆಂಬರ್ 1999ರಲ್ಲಿ ನಡೆದ ಆಡಿಲೇಡ್ ಟೆಸ್ಟ್ ಮ್ಯಾಚ್‌ನಲ್ಲಿ 61ರನ್ ಗಳಿಸಿ ಸಚಿನ್ ವಾರ್ನ್‌ಗೆ ಔಟ್ ಆದರೆ, ಡಿಸೆಂಬರ್ 1999 ಮೆಲ್ಬೋರ್ನ್ ಟೆಸ್ಟ್ ಮ್ಯಾಚ್ ನಲ್ಲಿ 116 ರನ್ ಬಾರಿಸಿದ ಸಚಿನ್, ಶೇನ್ ವಾರ್ನ್‌ಗೆ ಬಿಸಿ ಮುಟ್ಟಿಸಿದ್ದರು. ಇಬ್ಬರ ನಡುವಿನ ಆಟ ಮೇಲಾಟ ರೋಚಕವಾಗಿತ್ತು.

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಏಕದಿನ ಪಂದ್ಯ, ಮಾರ್ಚ್ 2001ರಲ್ಲಿ ಇಂದೋರ್‌ನಲ್ಲಿ ನಡೆಯಿತು. ಈ ಮ್ಯಾಚ್‌ನಲ್ಲಂತೂ ಸಚಿನ್ ಏಟಿಗೆ ವಾರ್ನ್ ಮುಟ್ಟಿ ನೋಡಿಕೊಳ್ಳಬೇಕು ಹಂಗಿತ್ತು. ಸಚಿನ್ 125 ಬಾಲ್‌ಗೆ 139 ರನ್ ಪೇರಿಸಿದರೆ, ಶೇನ್ ವಾರ್ನ್ 10 ಓವರ್ ಮಾಡಿ ಯಾವುದೇ ವಿಕೆಟ್ ಪಡೆಯದೇ 64 ರನ್ ಕೊಟ್ಟಿದ್ದರು.‌ ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ

ಒಟ್ಟಾರೆ ವಿಶ್ವ ಕ್ರಿಕೆಟ್‌ನಲ್ಲಿ ಈ ಇಬ್ಬರು ದಂತ ಕಥೆಗಳು ಮೈದಾನಕ್ಕಿಳಿದರೆ ಸಿಗುತ್ತಿದ್ದ ರೋಮಾಂಚನಕಾರಿ ಆಟ ಎಂದಿಗೂ ಸಿಗಲಾರದು.‌ ಮೈದಾನದಲ್ಲಿ ಎಷ್ಟೇ ಡೆಡ್ಲಿ ವಿರೋಧಿಗಳಾಗಿದ್ದರೂ ವೈಯಕ್ತಿಕವಾಗಿ ಸಂಬಂಧ ತುಂಬಾ ಚೆನ್ನಾಗಿತ್ತು. ನನ್ನ ಕನಸಿನಲ್ಲಿ ಸಚಿನ್ ಬರ್ತಾರೆ ಎಂಬುದನ್ನ ಸ್ವತಃ ಶೇನ್ ವಾರ್ನ್ ಹೇಳಿಕೊಂಡಿದ್ದನ್ನ ಇಡೀ ವಿಶ್ವ ಕ್ರಿಕೆಟ್ ಅಚ್ಚರಿಯಿಂದ ನೋಡಿದ್ದನ್ನೂ ಯಾರೂ ಮರೆಯುಂತಿಲ್ಲ.‌ ಮ್ಯಾಜಿಕಲ್ ಬೌಲರ್ ವೀರ, ವಿಶ್ವ ಕ್ರಿಕೆಟ್‌ನ ವಿಕೆಟ್‌ಗಳ ಸರದಾರ.. ಲೆಗ್ ಸ್ಪಿನ್ ಮೋಡಿಗಾರ.. ಈಗ ಎಲ್ಲರನ್ನು ಆಗಲಿದ್ದಾರೆ.‌ ಅವರ ಆತ್ಮಕ್ಮೆ ಶಾಂತಿ ಸಿಗಲಿ.

Comments

Leave a Reply

Your email address will not be published. Required fields are marked *