ಕೋಲ್ಕತ್ತಾ: ಮುಂದಿನ ವರ್ಷ ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದ್ದು, ಈ ವೇಳೆ ಆಡುವ 4 ಟೆಸ್ಟ್ ಪಂದ್ಯಗಳಲ್ಲಿ 2 ಪಂದ್ಯಗಳನ್ನು ಡೇ-ನೈಟ್ ಆಡುವಂತೆ ಆಸೀಸ್ ಕ್ರಿಕೆಟ್ (ಸಿಎ) ಬಿಸಿಸಿಐಗೆ ಮನವಿ ಮಾಡಿದೆ.
ಸಿಎ ಮುಖ್ಯಸ್ಥರಾಗಿರುವ ಅರ್ಲ್ ಎಡ್ಡಿಂಗ್ಸ್ ತಮ್ಮ ಮನವಿಯನ್ನು ಬಿಸಿಸಿಐ ಮುಂದಿಟ್ಟಿದ್ದು, ಬರುವ ಜನವರಿಯಲ್ಲಿ ಭಾರತ ಆಸೀಸ್ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಕುರಿತು ಚರ್ಚೆ ನಡೆಸುವ ವೇಳೆ ಮುಂದಿನ ಟೆಸ್ಟ್ ಟೂರ್ನಿಯಲ್ಲಿ ಅಡಿಲೇಡ್ ಹಾಗೂ ಪರ್ಥ್ ಕ್ರೀಡಾಂಗಣದಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಅಧಿಕೃತ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿತ್ತು. ಅಲ್ಲದೇ ಪಂದ್ಯದಲ್ಲಿ ಎದುರಾಳಿ ತಂಡವನ್ನು ಸುಲಭವಾಗಿ ಮಣಿಸಿ ಜಯ ಪಡೆದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅತಿಥೇಯ ಮಂಡಳಿಯ ಕೋರಿಕೆಯಂತೆ ವ್ಯವಹರಿಸುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಆಸೀಸ್ ಕ್ರಿಕೆಟ್ ಮುಖ್ಯಸ್ಥರು 2 ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಮನವಿ ಮಾಡಲು ಮುಂದಾಗಿದ್ದಾರೆ.
ಇತ್ತ ಆಸೀಸ್ ಮನವಿಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಸೌರವ್ ಗಂಗೂಲಿ, ಇದುವರೆಗೂ ಅಧಿಕೃತವಾಗಿ ಆಸೀಸ್ ಕ್ರಿಕೆಟ್‍ನಿಂದ ಯಾವುದೇ ಮನವಿ ಬಂದಿಲ್ಲ. ಆದರೂ ಒಂದೇ ಟೂರ್ನಿಯಲ್ಲಿ 2 ಡೇ-ನೈಟ್ ಪಂದ್ಯವೆಂದರೆ ಹೆಚ್ಚಾಗುತ್ತದೆ. ಸಿರೀಸ್ ಒಂದರಲ್ಲಿ ಒಂದೇ ಡೇ-ನೈಟ್ ಪಂದ್ಯವಿದ್ದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದ ನವೆಂಬರ್ ನಲ್ಲಿ ಟೀಂ ಇಂಡಿಯಾ ತಂಡದ ಆಸೀಸ್ ಪ್ರವಾಸವನ್ನು ಕೈಗೊಳ್ಳಲಿದೆ. ಈ ವೇಳೆ 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ.


Leave a Reply