ಮೆಕ್ಸಿಕೋ: ಕೆಲವು ಹಾರರ್ ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಗೊಂಬೆಗಳನ್ನ ದೆವ್ವದ ರೀತಿ ತೋರಿಸಿರೋದನ್ನ ನೋಡಿರ್ತೀರ. ಅದೇ ರೀತಿ ಸಮಾಧಿಯ ಮೇಲೆ ಕುಳಿತಿರುವಂತೆ ಕಾಣುವ ಗೊಂಬೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ಗೊಂಬೆ, ಪಕ್ಕದಲ್ಲಿರೋ ಫೀಡಿಂಗ್ ಬಾಟಲಿಯಲ್ಲಿ ರಕ್ತದಂತೆ ಕಾಣೋ ಕೆಂಪು ಬಣ್ಣದ ದ್ರಾವಣ. ನೋಡಿದಾಕ್ಷಣ ಎಂಥವರಿಗೂ ಬೆಚ್ಚಿಬೀಳಿಸುತ್ತದೆ. ಇದು ನಿಜವಾದ ಮಗುನಾ ಅಥವಾ ಗೊಂಬೆನಾ ಅನ್ನೋ ಅನುಮಾನ ಕೂಡ ಬರದೇ ಇರದು. ಈ ವಿಡಿಯೋವನ್ನ ಹಂಚಿಕೊಂಡ ನಾಲ್ಕು ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

ಈ ವಿಡಿಯೋವನ್ನ ಮಹಿಳೆಯೊಬ್ಬರು ಬ್ರೆಜಿಲ್‍ನಲ್ಲಿ ಚಿತ್ರೀಕರಿಸಿದ್ದು, ಮೆಕ್ಸಿಕನ್ ಮಾಧ್ಯಮಗಳಲ್ಲೂ ಕೂಡ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದವರು ಹೌಹಾರಿದ್ದು, ದೆವ್ವದ ಗೊಂಬೆ ಎಂದು ಕಮೆಂಟ್ ಮಾಡಿದ್ದಾರೆ.
ಗೊಂಬೆಯ ಚಲಿಸುವ ಕಣ್ಣುಗಳು ಕೇವಲ ಒಂದು ಟ್ರಿಕ್ ಅಷ್ಟೇ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. ಇದೊಂದು ದೃಷ್ಟಿಭ್ರಮೆ(ಆಪ್ಟಿಕಲ್ ಇಲ್ಲ್ಯೂಷನ್), ಹಾಗಂತ ಇದನ್ನ ನೋಡಿದ್ರೆ ಭಯ ಆಗಲ್ಲ ಅಂತೇನಿಲ್ಲ, ಯಾರಾದ್ರೂ ಕಾಪಾಡಿ ಅಂತ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮೆಕ್ಸಿಕೋದ ಸ್ಥಳೀಯ ಮಾಧ್ಯಮಗಳು ಈ ಗೊಂಬೆಯನ್ನ ಚೈಲ್ಡ್ ಪ್ಲೇ ಸರಣಿ ಚಿತ್ರದ ಗೊಂಬೆ ಚಕ್ಕಿ ಗೆ ಹೋಲಿಸಿದ್ದಾರೆ.

ಆದ್ರೆ ಮೆಕ್ಸಿಕೋದಲ್ಲಿ ಭಯಾನಕ ಗೊಂಬೆಗಳೇನೂ ಹೊಸದಲ್ಲ. ಮೆಕ್ಸಿಕೋ ನಗರಕ್ಕೆ ಹತ್ತಿರವಿರುವ ಕ್ಸೋಚಿಮಿಕೋದ ಕಾಲುವೆಗಳ ನಡುವೆ ಗೊಂಬೆಗಳ ದ್ವೀಪವೇ ಇದೆ. ಇಲ್ಲಿನ ಮರಗಳಲ್ಲಿ ಗೊಂಬೆಗಳನ್ನ ಹಗ್ಗದಿಂದ ನೇತು ಹಾಕಲಾಗಿದ್ದು ಭಯ ಹುಟ್ಟಿಸುತ್ತದೆ.

ಇಲ್ಲಿನವರು ಹೇಳುವ ಪ್ರಕಾರ, ದ್ವೀಪವನ್ನ ನೋಡಿಕೊಳ್ತಿದ್ದ ಜುಲೀಯಾನ್ ಸಂಟಾನಾ ಬರ್ರೇರಾ ಒಂದು ದಿನ ಬೆಳಗ್ಗೆ ಇಲ್ಲಿ ಹುಡುಗಿಯ ಮೃತದೇಹವನ್ನ ನೋಡಿದ್ದರು. ಇದರಿಂದ ಅವರು ತುಂಬಾ ಭಯಗೊಂಡಿದ್ದರು. ಬಳಿಕ ಅದೇ ಹುಡುಗಿಗೆ ಸೇರಿರಬಹುದು ಎನ್ನಲಾದ ಗೊಂಬೆಯ ಮೇಲೆ ಎಡವಿದ್ದರು. ನಂತರ ಆ ಗೊಂಬೆಯನ್ನ ಅಲ್ಲಿನ ಮರಕ್ಕೆ ಸಿಕ್ಕಿಸಿದ್ದರು. ಆದ್ರೆ ಮೃತ ಮಗುವಿನ ಬಗ್ಗೆ ಮರೆಯಲಾಗದೆ ಮರಗಳಿಗೆ ಗೊಂಬೆಗಳನ್ನ ನೇತುಹಾಕೋದನ್ನ ಮುಂದುವರೆಸಿದ್ದರು ಎಂದು ಹೇಳಲಾಗುತ್ತದೆ. ಈಗ ಈ ಮರಗಳಲ್ಲಿ ನೇತುಹಾಕಲಾಗಿರೋ ನೂರಾರು ಗೊಂಬೆಗಳನ್ನ ಕಾಣಬಹುದು.
https://www.youtube.com/watch?v=6WbEPnlr0CA

Leave a Reply