ಕಾರುಗಳ ಮೇಲೆ ಚೌಕಿದಾರ್ ಸ್ಟಿಕ್ಕರ್- ಉಡುಪಿಯಲ್ಲಿ ಜೋರಾಗಿದೆ ಎಲೆಕ್ಷನ್ ವಾರ್

ಉಡುಪಿ: ಲೋಕಸಭಾ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಣ ರಂಗೇರುತ್ತಿದೆ. ಪ್ರಚಾರದ ಅಬ್ಬರ ಜಾಸ್ತಿಯಾಗುತ್ತಿದ್ದಂತೆ ಕಾರ್ಯಕರ್ತರ ನಡುವೆ ಸ್ಟಿಕ್ಕರ್ ವಾರ್ ಶುರುವಾಗಿದೆ.

ರಾಜ್ಯದಲ್ಲಿ ಬಿಜೆಪಿ “ಮೆ ಬೀ ಚೌಕಿದಾರ್” ಅಂದರೆ, ಮೈತ್ರಿ ಪಕ್ಷಗಳು “ಚೌಕಿದಾರ್ ಚೋರ್ ಹೇ” (ಕಾವಲುಗಾರ ಕಳ್ಳ) ಅಂತ ಪ್ರಚಾರ ಶುರು ಮಾಡಿದೆ. ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಾನು ದೇಶದ ಚೌಕಿದಾರ, ದೇಶದಲ್ಲಿ ಭ್ರಷ್ಟಾಚಾರ ನಡೆಯದಂತೆ ಹಾಗೂ ಶತ್ರುರಾಷ್ಟ್ರಗಳಿಂದ ದೇಶವನ್ನು ಕಾವಲುಗಾರನಂತೆ ರಕ್ಷಣೆ ಮಾಡುತ್ತೇನೆ ಎಂದಿದ್ದರು. ಅಂದಿನಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕಿದಾರ್ ಶಬ್ದವನ್ನು ಫೋಕಸ್ ಮಾಡಿ ಮೋದಿ ವಿರುದ್ಧ ಪ್ರಚಾರಕ್ಕೆ ಹೋದಲ್ಲಿ ಬಂದಲ್ಲಿ “ಚೌಕಿದಾರ್ ಚೋರ್ ಹೇ” ಎಂದಿದ್ದರು. ಅಲ್ಲದೆ ರಫೇಲ್, ನೀರವ್ ಮೋದಿ ಬ್ಯಾಂಕ್ ಗೋಲ್ ಮಾಲ್, ಅದಾನಿ ಅಂಬಾನಿ ವಿಚಾರದ ಪ್ರತಿಭಟನೆಗಳಲ್ಲಿ ಚೌಕಿದಾರ್ ಚೋರ್ ಎಂಬ ಘೋಷವಾಕ್ಯ ಬಳಸಲಾಗಿತ್ತು.

ಆದರೇ 2019 ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಮುಂದಾಗಿದೆ. ದೇಶಾದ್ಯಂತ “ಮೇ ಬಿ ಚೌಕಿದಾರ್” ಹೆಸರಲ್ಲೇ ಅಭಿಯಾನ ನಡೆಸುತ್ತಿದೆ. ಈ ನಡುವೆ ಉಡುಪಿಯಲ್ಲಿ ಬಿಜೆಪಿ ನಾಯಕರು “ಮೆ ಬೀ ಚೌಕಿದಾರ್” ಸ್ಟಿಕ್ಕರನ್ನು ಕಾರಿಗೆ ಅಂಟಿಸಿ ಪ್ರಚಾರ ಮಾಡುತ್ತಿದ್ದರು. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಾಹನಗಳಲ್ಲಿ ಚೌಕಿದಾರ್ ಸ್ಟಿಕ್ಕರ್ ಹಾಕಿ ಓಡಾತ್ತಿರುವುದನ್ನು ನೋಡಿದ ಮೈತ್ರಿ ಕಾರ್ಯಕರ್ತರು ಈ ಕ್ಯಾಂಪೇನ್‍ಗೆ ಟಾಂಗ್ ನೀಡಲು ಮುಂದಾಗಿದೆ.

“ಚೌಕಿದಾರ್ ಚೋರ್ ಹೇ” ಸ್ಟಿಕ್ಕರ್‍ಗಳನ್ನು ಕಾರಿಗೆ ಅಂಟಿಸಿ ಮೈತ್ರಿ ಪಕ್ಷದ ಕಾರ್ಯಕರ್ತರು ಓಡಾಡುತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಸ್ಟಿಕ್ಕರ್ ಮೂಲಕವೇ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. ಈ ಬಗ್ಗೆ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ, ಚೌಕಿದಾರ ಕೊಳ್ಳೆ ಹೊಡೆಯಲು ಬಿಡುತ್ತಿದ್ದಾನೆ. ರಫೇಲ್ ಡೀಲ್ ಮಾಡಿ ಅಂಬಾನಿಯ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಗುಳುಂ ಮಾಡಿದ್ದಾನೆ. ಬ್ಯಾಂಕ್ ಅವ್ಯವಹಾರ ನಡೆಯುತ್ತಿದ್ದರೂ ಕಾವಲುಗಾರ ಕಳ್ಳರನ್ನು ಹಿಡಿಯಲಿಲ್ಲ ಎಂದು ಆರೋಪಿಸಿದರು.

ಚೌಕಿದಾರ್ ಚೋರ್ ಅಂದಿರುವ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಕಮಲ ಪಕ್ಷ ಗರಂ ಆಗಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ಜನ ಬೆಂಬಲ, ಬಿಜೆಪಿಯ ಅಬ್ಬರದ ಪ್ರಚಾರಕ್ಕೆ ಮೈತ್ರಿ ಪಕ್ಷ ನಲುಗಿದೆ. ನಮ್ಮ ಪ್ರಚಾರ ವಾಕ್ಯ, ಘೋಷ ವಾಕ್ಯದ ವಿರುದ್ಧ ಪ್ರಚಾರ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಇದನ್ನೆಲ್ಲ ಬಿಟ್ಟು ತೋರ್ಪಡಿಕೆಗಾದರೂ ಮೈತ್ರಿಯ ಬಗ್ಗೆ, ಪಕ್ಷದ ಚಿಹ್ನೆಯ ಬಗ್ಗೆ, ಅಭ್ಯರ್ಥಿಯ ಬಗ್ಗೆ ಪ್ರಚಾರ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

Comments

Leave a Reply

Your email address will not be published. Required fields are marked *