ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

ಮಂಗಳೂರು: ದೀಪಾವಳಿ ಬಂದರೆ ಪಟಾಕಿ ಪ್ರಿಯರಿಗೆ ಗಮ್ಮತ್ತೇ ಗಮ್ಮತ್ತು. ಎಲ್ಲೆಡೆ ಪಟಾಕಿ ಸದ್ದು, ಗಿರಗಿಟ್ಲೆ ತಿರುಗೋ ನೆಲಚಕ್ರ ಹೊತ್ತಿಸಿ ಆಡುವ ಮಕ್ಕಳು. ಆದರೆ ಮಂಗಳೂರಿನಲ್ಲಿ ಪಟಾಕಿ ಸಂಭ್ರಮ ಈ ಬಾರಿ ತುಂಬಾನೇ ಕಮ್ಮಿಯಾಗಿದೆ. ಹೀಗಾಗಿ ಪಟಾಕಿ ಮಾರಾಟದ ಅಂಗಡಿಗಳಿಗೆ ಬೇಜಾನ್ ಲಾಸ್ ಆಗಿದೆ.

ಹೀಗೆ ಸಾಲು ಸಾಲಾಗಿರೋ ಪಟಾಕಿ ಅಂಗಡಿಗಳಲ್ಲಿ ಹೆಚ್ಚಿನವರು ಧೂಳು ಹೊಡೆಯುತ್ತಿದ್ದಾರೆ. ಈ ಸಾರಿ ಪಟಾಕಿ ಬಿಸಿನೆಸ್ ಲಗಾಡಿ ಹೋಯ್ತು ಎಂದು ತಲೆಗೆ ಕೈ ಹೊತ್ತುಕೊಂಡವರು ಇದ್ದಾರೆ. ಹೌದು. ಈ ಬಾರಿ ದೀಪಾವಳಿಗೆ ಪಟಾಕಿಯ ಮೆರುಗು ಮರೆಯಾಗಿದೆ. ಹಿಂದಿನಂತೆ ಪಟಾಕಿಯ ಚಿತ್ತಾರವಂತೂ ನೋಡೋಕೆ ಸಿಗುತ್ತಿಲ್ಲ. ಅತೀ ಹೆಚ್ಚು ಪಟಾಕಿ ಮಾರಾಟಕ್ಕೆ ಹೆಸರಾಗಿದ್ದ ಮಂಗಳೂರು ನಗರದಲ್ಲಿ ಅರ್ಧಕ್ಕರ್ಧ ಬಿಸಿನೆಸ್ ಡೌನ್ ಆಗಿದೆಯಂತೆ. ನೋಟ್ ಬ್ಯಾನ್ ಮತ್ತು ಜನರಲ್ಲಿ ಪಟಾಕಿಯಿಂದ ಪರಿಸರ ನಾಶವಾಗುತ್ತಿದೆಯೆಂಬ ಜಾಗೃತಿ ಬಂದಿದ್ದರಿಂದ ಹಿಂದಿಗಿಂತ ವ್ಯಾಪಾರ ತುಂಬಾನೇ ಕಮ್ಮಿಯಾಗಿದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.

ಈ ಬಾರಿ ದೆಹಲಿ ನಗರ ವ್ಯಾಪ್ತಿಯಲ್ಲಿ ಪಟಾಕಿ ನಿಷೇಧ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನೊಂದೆಡೆ ಪರಿಸರ ಹೋರಾಟಗಾರರು ಕೂಡ ಜಾಲತಾಣದಲ್ಲಿ ಪಟಾಕಿ ವಿರುದ್ಧ ಅಭಿಯಾನ ನಡೆಸಿದ್ದರು. ಇವೆಲ್ಲದರ ಪರಿಣಾಮ ಪಟಾಕಿಯ ಮಾರಾಟದ ಮೇಲಾಗಿದ್ದು, ಸ್ವತಃ ಜನರೇ ಖರೀದಿಗೆ ಬರುತ್ತಿಲ್ಲ. ಇದರಿಂದಾಗಿ ದೀಪಾವಳಿಯ ಮೊದಲ ದಿನವೇ ಭರ್ಜರಿ ವ್ಯಾಪಾರ ನಿರೀಕ್ಷಿಸಿದ್ದ ವ್ಯಾಪಾರಸ್ಥರು ಬಿಸಿನೆಸ್ ಡಲ್ ಆಗಿದ್ದರಿಂದ ಸೊರಗಿದ್ದಾರೆ.

ಇದರ ಜೊತೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಪೊಲೀಸರು ಪಟಾಕಿ ಮಾರಾಟಕ್ಕೆ ನಿಯಂತ್ರಣ ಹೇರಿದ್ದರಿಂದ ವ್ಯಾಪಾರ ಮತ್ತಷ್ಟು ಕಷ್ಟವಾಗಿದೆಯಂತೆ. ಕೆಲವರಂತೂ 20 ವರ್ಷಗಳಿಂದ ಪಟಾಕಿ ವ್ಯಾಪಾರ ನಡೆಸುತ್ತಿದ್ದವರಿಗೆ ಇದೇ ಮೊದಲ ಬಾರಿಗೆ ವ್ಯಾಪಾರದಲ್ಲಿ ಡಲ್ ಹೊಡೆದಿದೆ. ಹೊಸ ವರ್ಷ ಹಾಗೂ ಇತರೆ ಸಮಾರಂಭಗಳಿಗೆ ಸಿಕ್ಕಾಪಟ್ಟೆ ಪಟಾಕಿ ಹೊಡೆಯೋದನ್ನು ವಿರೋಧಿಸದವರು ಕೇವಲ ದೀಪಾವಳಿ ಹಬ್ಬದ ಪಟಾಕಿಗೆ ವಿರೋಧ ವ್ಯಕ್ತಪಡಿಸಿರೋದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ. ವರ್ಷಕ್ಕೊಮ್ಮೆ ಹಬ್ಬದ ಹೆಸರಲ್ಲಿ ಸಿಡಿಸೋ ಪಟಾಕಿಗೆ ಸರ್ಕಾರ ನಿಯಂತ್ರಣ ಹೇರಬಾರದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *