ಕೊಪ್ಪಳದಲ್ಲಿ ಕೆಸರು ನೀರು ಕುಡಿದು ಹಸುಗಳು ಸಾವು – ತುಂಗಭದ್ರಾ ಹಿನ್ನೀರಿನಲ್ಲಿ ಮನಕಲಕುವ ದುರಂತ

ಕೊಪ್ಪಳ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗ್ತಿದೆ. ಭೀಕರ ಬರದಿಂದ ಜಾನುವಾರುಗಳಿಗೆ ಕುಡಿಯಲು ಹನಿ ನೀರು, ಮೇವು ಸಿಗ್ತಿಲ್ಲ. ಹೆಚ್ಚಾಗ್ತಿರೋ ಬಿಸಿಲಿನ ತಾಪ ತಾಳಲಾರದೆ ಜಾನುವಾರಗಳು ಬಲಿಯಾಗ್ತಿವೆ. ಬರದ ಮಧ್ಯೆ ರೈತರ ಜಾನುವಾರುಗಳು ಕೂಡ ಬಲಿಯಾಗ್ತಿರೋದ್ರಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಗೋಶಾಲೆಯಲ್ಲಿ ಸಮರ್ಪಕವಾಗಿ ಮೇವು, ನೀರು ಪೂರೈಸ್ತಿಲ್ಲ ಅಂತ ಬುಧವಾರ ಉಪ ತಹಸೀಲ್ದಾರ್ ಕಚೇರಿ ಆವರಣಕ್ಕೆ ಜಾನುವಾರು ನುಗ್ಗಿಸಿ ರೈತರು ಪ್ರತಿಭಟನೆ ಮಾಡಿದ್ರು. ಕೊಪ್ಪಳದ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಮೇವಿನ ಸಮಸ್ಯೆ ಆಗ್ತಿದೆ ಅಂತ ಅಧಿಕಾರಿಗಳು ಒಪ್ಪಿಕೊಂಡಿದ್ರು. ಆದ್ರೆ ಇದೇ ಕೊಪ್ಪಳದಲ್ಲೀಗ ಜಾನುವಾರುಗಳ ಮರಣ ಮೃದಂಗ ಶುರುವಾಗಿದೆ.

ಬಿಸಿಲಿನ ತಾಪಕ್ಕೆ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ. ತುಂಗಭದ್ರಾ ಡ್ಯಾಂನ ಹಿನ್ನೀರು ಪ್ರದೇಶದಲ್ಲಿ ಹನಿ ನೀರು ಇಲ್ದೆ ಕೆಸರು ನೀರು ಕುಡಿದು 30ಕ್ಕೂ ಹೆಚ್ಚು ಹಸುಗಳು ಅಸು ನೀಗಿವೆ.

ಕೊಪ್ಪಳ ಜಿಲ್ಲಾಡಳಿತ ತೆರೆದಿರೋ ಗೋಶಾಲೆಯಲ್ಲೂ ಬಿಸಿಲಿನ ತಾಪ ತಾಳಲಾರದೆ ಈಚೆಗೆ ಎರಡು ಜಾನುವಾರುಗಳು ಬಲಿಯಾಗಿವೆ. ಬಳ್ಳಾರಿ, ಗದಗ, ಬಾಗಲಕೋಟೆ ಜಿಲ್ಲೆಗಳಿಂದ್ಲೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜಾನುವಾರುಗಳು, ಸಾವಿರಾರು ಕುರಿಗಳು ತುಂಗಭದ್ರಾ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿವೆ. ಆದ್ರೆ ಇದು ಅಂಥ್ರಾಕ್ಸ್ ರೋಗದಿಂದ ಆಗಿರೋ ದುರಂತ ಅಂತಾ ಅಧಿಕಾರಿಗಳು ಹೇಳುತ್ತಾರೆ.

ಒಂದೆಡೆ ಅಂಥ್ರಾಕ್ಸ್ ರೋಗಕ್ಕೆ ಬಲಿಯಾದ್ರೆ ಮತ್ತೊಂದೆಡೆ ಬಿಸಿಲಿತಾಪ, ಕುಡಿಯಲು ನೀರು, ಮೇವು ಸಿಗ್ತಿಲ್ಲ. ಅಧಿಕಾರಿಗಳು ಇನ್ನಾದ್ರೂ ತುಂಗಭದ್ರಾ ಡ್ಯಾಂಗೆ ನೀರು ಬಿಟ್ರೆ ಮತ್ತಷ್ಟು ರೈತರು ಕಣ್ಣೀರು ಹಾಕೋದು ತಪ್ಪುತ್ತೆ.

Comments

Leave a Reply

Your email address will not be published. Required fields are marked *