ಹಸಿವಿನಿಂದ ಬಳಲಿದ್ದ ಮಂಗಗಳಿಗೆ ಹಾಲುಣಿಸಿದ ಕಾಮಧೇನು

ಜೈಪುರ: ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜೊತೆಗೆ ಪ್ರಾಣಿಗಳು ತತ್ತರಿಸಿವೆ. ಹೀಗೆ ಒಂದೆಡೆ ಬಿಸಿಲು ಇನ್ನೊಂದೆಡೆ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿದ್ದ ಮಂಗಗಳಿಗೆ ಹಸುವೊಂದು ಹಾಲುಣಿಸಿ ತಾಯಿಯಾಗಿದೆ.

ಹೌದು. ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಇರುವ ಹಸು ಈಗ ಭಾರೀ ಸುದ್ದಿಯಾಗಿದೆ. ಈ ಹಸು ಈ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿಬಿಟ್ಟಿದೆ. ಯಾಕೆಂದರೆ ಹಸು ಹಸಿವಿನ ಬೇಗೆಯಲ್ಲಿ ಬಳಲಿ, ರೋಸಿಹೋಗಿದ್ದ ಮಂಗಗಳಿಗೆ ಹಾಲು ನೀಡಿ ತಾಯಿಯಾಗಿ ಪೋಷಿಸುತ್ತಿದೆ.

ಬಹಳ ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ಪ್ರತಿನಿತ್ಯ ಮಂಗಗಳಿಗೆ ಹಾಲು ನೀಡಿ ಅವುಗಳ ಜೀವ ಉಳಿಸಿದೆ.

ಬೇಸಿಗೆ ಬೇಗೆಗೆ ನೀರು, ಆಹಾರವಿಲ್ಲದೆ ಪ್ರಾಣಿಗಳು ಪರದಾಡುತ್ತಿವೆ. ಹೀಗೆ ಆಹಾರ, ನೀರಿಗಾಗಿ ಹಸಿವಿನಿಂದ ಬಳಲಿದ್ದ ದೇವಸ್ಥಾನದ ಸಮೀಪದಲ್ಲಿದ್ದ ಮಂಗಗಳಿಗೆ ಹಸು ಒಂದು ಬಾರಿ ಹಾಲು ನೀಡಿತ್ತು. ಆ ಬಳಿಕ ಈಗ ಪ್ರತಿದಿನವೂ ಈ ಮಂಗಗಳಿಗೆ ಹಾಲು ನೀಡಿ ಅವುಗಳ ಹೊಟ್ಟೆ ತುಂಬಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಮೂಲಕ ಈ ವಿಶೇಷ ಹಸು ಜಿಲ್ಲೆಯಲ್ಲಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದೆ. ಹೀಗಾಗಿ ಇದನ್ನು ನೋಡಲು ಅಕ್ಕ-ಪಕ್ಕದ ಗ್ರಾಮದಿಂದ ಜನರು ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ. ಹಾಗೆಯೇ ತಾಯಿಯ ಸ್ಥಾನದಲ್ಲಿ ನಿಂತು ಮಂಗಗಳಿಗೆ ಹಾಲು ನೀಡಿ ಪೋಷಿಸುತ್ತಿರುವ ಹಸುವನ್ನು ಕಂಡು ಖುಷಿಪಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *