ಆರಂಭದಲ್ಲೇ ಖಡಕ್ ಸೂಚನೆ ಕೊಟ್ಟು ಕ್ಯಾಬಿನೆಟ್ ಸಭೆ ಆರಂಭಿಸಿದ ಸಿಎಂ

ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಆರಂಭದಲ್ಲೇ ಎಲ್ಲ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಎಲ್ಲೇ ಹೋದರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈಗಾಗಲೇ ನಾಲ್ವರು ಸಚಿವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಆಹಾರ ವಿತರಣೆ, ದಿನಸಿ ವಿತರಣೆ ಎನ್ನುವ ನೆಪದಲ್ಲಿ ಗುಂಪು ಸೇರಿಸಬಾರದು. ಕ್ಷೇತ್ರದ ಪ್ರವಾಸದ ಸಂದರ್ಭದಲ್ಲಿ ಕೂಡಾ ಎಚ್ಚರದಿಂದಿರಿ ಎಂದು ಸೂಚಿಸಿದ್ದಾರೆ.

ಒಂದೊಮ್ಮೆ ಸಚಿವರಿಗೆ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಕಷ್ಟ ಆಗಲಿದೆ. ಇಲ್ಲಿ ತನಕ ಮಾಡಿದ್ದ ಪ್ರಯತ್ನ ಎಲ್ಲವೂ ವ್ಯರ್ಥವಾಗಲಿದೆ. ನೀವು ಜನರಿಗೆ ಮಾದರಿ ಆಗಬೇಕು ಎಂದು ಸಿಎಂ ಕಿವಿಮಾತನ್ನು ಎಲ್ಲ ಸಚಿವರಿಗೆ ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ವಾಹಿನಿಯ ಕ್ಯಾಮೆರಾಮನ್‍ಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಸುಧಾಕರ್ ಹಾಗೂ ಸಿ.ಟಿ.ರವಿ ಹೋಮ್ ಕ್ವಾರಂಟೈನ್ ನಲ್ಲಿದ್ದು ಇಂದಿನ ಕ್ಯಾಬಿನೆಟ್ ಸಭೆಗೆ ಗೈರಾಗಿದ್ದರು.

ಕೊರೊನಾ ಸೋಂಕಿತ ಕ್ಯಾಮೆರಾಮನ್ 24ರಂದೇ ಆಸ್ಪತ್ರೆಗೆ ದಾಖಲಾಗಿದ್ದು, ಆ ದಿನದಿಂದಲೇ ಸಚಿವರ ಕ್ವಾರಂಟೈನ್ ಆಗಬೇಕಿತ್ತು. ಹೋಮ್ ಕ್ವಾರಂಟೈನ್ ಆಗುವ ಅವಧಿ 14 ದಿನ ಅಂತ ಮಾರ್ಗಸೂಚಿಯಲ್ಲಿದೆ. ಬುಧವಾರ ಸುಧಾಕರ್ ಮಂಡ್ಯದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕ್ವಾರಂಟೈನ್‍ನಲ್ಲಿ ಇರಬೇಕಾದವರು ಎಲ್ಲಂದರಲ್ಲಿ ಓಡಾಡಬಹುದೇ? ಜನರಿಗೊಂದು ನ್ಯಾಯ? ಸಚಿವರಿಗೊಂದು ನ್ಯಾಯವೇ ಎಂಬ ಪ್ರಶ್ನೆ ಎದ್ದಿತ್ತು.

ಡಿಕೆಶಿ ಪ್ರಶ್ನೆ: ಕ್ಯಾಮೆರಾಮನ್ ಜೊತೆ ಸಿಎಂ, ಡಿಸಿಎಂ, ಸಚಿವರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಆದರೆ ಅವರು ಯಾಕೆ ಕ್ವಾರಂಟೈನ್ ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವಿಟ್ಟರ್‍ನಲ್ಲಿ ಪ್ರಶ್ನೆ ಕೇಳಿದ್ದರು. ಈ ಟ್ವೀಟ್ ಬೆನ್ನಲ್ಲೇ ಸುಧಾಕರ್ ಟ್ವೀಟ್ ಮಾಡಿ ನಾನು ಹೋಮ್ ಕ್ವಾರಂಟೈನ್‍ನಲ್ಲಿದ್ದೇನೆ ಎಂದು ತಿಳಿಸಿದ್ದರು.

ಸೆಲ್ಫ್ ಕ್ವಾರಂಟೈನ್: ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದ ಬೊಮ್ಮಾಯಿ, ಅಶ್ವಥ್ ನಾರಾಯಣ, ಸಿಟಿ ರವಿ, ಸುಧಾಕರ್ ಅವರ ಪರೀಕ್ಷೆ ನಡೆದಿದ್ದು, ನೆಗೆಟಿವ್ ಬಂದಿದೆ. ಸೋಮಣ್ಣ ಅವರ ಪರೀಕ್ಷಾ ವರದಿ ಬರಬೇಕಿದೆ.

ಪತ್ರಕರ್ತರು ಕ್ವಾರಂಟೈನ್: ಕ್ಯಾಮೆರಾಮನ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಪತ್ರಕರ್ತರು ಈಗಾಗಲೇ ಕ್ವಾರಂಟೈನ್ ನಲ್ಲಿದ್ದಾರೆ. ಏ.20 ರಿಂದ 22ರವರೆಗೆ ಸೋಂಕಿತ ಕ್ಯಾಮೆರಾಮನ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ, ವಿಧಾನಸೌಧಕ್ಕೆ ಭೇಟಿ ನೀಡಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ, ಸಿಟಿ ರವಿ, ಸೋಮಣ್ಣ, ಸುಧಾಕರ್ ಅವರ ಸಂದರ್ಶನವನ್ನು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಕಾರಿನಲ್ಲೇ ಕುಳಿತುಕೊಂಡು ಮಾತನಾಡಿದ್ದಾರೆ.

ನೆಗೆಟಿವ್ ಬಂದಿದೆ: ಡಿಕೆ ಶಿವಕುಮಾರ್ ಟ್ವೀಟ್ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿಟಿ ರವಿ ಟ್ವೀಟ್ ಮಾಡಿ, ಪಾಸಿಟಿವ್ ಬಂದ ಕ್ಯಾಮೆರಾಮೆನ್ ಜೊತೆ ಸಭೆಯಲ್ಲಿ ಹತ್ತಿರದಿಂದ ಯಾವುದೇ ಸಂಪರ್ಕ ಆಗದೇ ಇದ್ದರೂ ನಾನು ಏ.28ರಂದು ಪರೀಕ್ಷೆ ಎದುರಿಸಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *