ಮಕ್ಕಳಾಗಲು ಮಾತ್ರೆ ತೆಗೆದುಕೊಂಡ ಜೋಡಿ- ಪತಿ ದುರ್ಮರಣ

ಬೆಂಗಳೂರು: ಮದುವೆಯಾಗಿ 11 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ದಂಪತಿ ಮಾತ್ರೆಗೆ ತೆಗೆದುಕೊಂಡಿದ್ದು, ಪರಿಣಾಮ ಪತಿ ಸಾವನ್ನಪ್ಪಿ, ಪತ್ನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯೊಂದು ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲದ ಅರಿಶಿನಕುಂಟೆ ಗ್ರಾಮದ ನಿವಾಸಿಗಳಾದ ಶಶಿಧರ್ ಹಾಗೂ ಪತ್ನಿ ಗಂಗಾಬಿಂಕಾ ಭಾನುವಾರ ರಾತ್ರಿ ಭೇದಿಯಿಂದ ಬಳಲುತ್ತಿದ್ದರು. ಹೀಗಾಗಿ ಸ್ಥಳೀಯರು ಈ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಶಶಿಧರ್ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಗಂಗಾಂಬಿಕ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಜೋಡಿ 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಇದೂವರೆಗೂ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಗ್ರಾಹಕರೊಬ್ಬರು ಆಯುರ್ವೇದಿಕ್ ವೈದ್ಯರನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಗ್ರಾಹಕ ತಿಳಿಸಿದ ವೈದ್ಯರಿಗೆ ಕರೆ ಮಾಡಿ ತಮಗೆ ಮಕ್ಕಳಾಗುವಂತೆ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆ ಬಳಿಕ ವೈದ್ಯರ ಜೊತೆ ಮೂವರು ಅಪರಿಚಿತರು ಕಾರಿನಲ್ಲಿ ಶಶಿಧರ್ ಅಂಗಡಿ ಬಳಿ ಭಾನುವಾರ ರಾತ್ರಿ ಬಂದಿದ್ದಾರೆ.

ಹೀಗೆ ಬಂದವರು ನಿಮಗೆ ಮಕ್ಕಳಾಗುತ್ತದೆ ಈ ಮಾತ್ರೆಗಳನ್ನು ಸೇವಿಸಿ ಎಂದು ಸಲಹೆ ನೀಡಿ ಮಾತ್ರೆಗಳನ್ನು ಕೊಟ್ಟು ಹೋಗಿದ್ದಾರೆ. ಅಲ್ಲದೆ ಚಿಕಿತ್ಸೆಯ ವೆಚ್ಚ 25,000 ಎಂದು ಬೇಡಿಕೆ ಇಟ್ಟಿದ್ದಾರೆ. ಶಶಿಧರ್ ಮೂವರ ಬಳಿಯಿಂದ 2 ಮಾತ್ರೆ ತೆಗೆದುಕೊಂಡು ಅವರಿಗೆ ತನ್ನ ಕೈಯಲ್ಲಿದ್ದ 2 ಸಾವಿರ ಹಣವನ್ನು ನೀಡಿದ್ದಾರೆ. ಹಣ ಕಡಿಮೆ ನೀಡಿದ್ದರಿಂದ ಸಿಟ್ಟುಗೊಂಡ ಮೂವರು, ನಾಳೆ ಮತ್ತೆ ಹಣ ಕೊಡಬೇಕು, ನಾವು ಬರುತ್ತೇವೆ ಎಂದು ಹೇಳಿ ತೆರಳಿದ್ದಾರೆ ಅಂತ ಪೊಲೀಸರು ವಿವರಿಸಿದ್ದಾರೆ.

ಮೂವರ ಮಾತು ನಂಬಿದ ದಂಪತಿ ಭಾನುವಾರವೇ ರಾತ್ರಿ ಮಾತ್ರೆ ಸೇವಿಸಿದ್ದಾರೆ. ತಕ್ಷಣವೇ ಇಬ್ಬರಿಗೂ ಭೇದಿ ಕಾಣಿಸಿಕೊಂಡಿದೆ. ಘಟನೆ ಸಂಬಂಧ ಗಂಗಾಂಬಿಕ ಅವರ ಹೇಳಿಕೆಯಂತೆ ಐಪಿಸಿ ಸೆಕ್ಷನ್ 304(ಕೊಲೆ ಯತ್ನ) ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ ತನಿಖೆ ತಂಡ ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರವೇ ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *