ಬೆಂಗ್ಳೂರಿನಲ್ಲಿ ಕೆಲ್ಸ ಕೊಡಿಸುವುದಾಗಿ ನಂಬಿಸಿ 26ರ ಯುವತಿಗೆ ಪತಿ, ಪತ್ನಿಯಿಂದ ಲೈಂಗಿಕ ಕಿರುಕುಳ!

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಾಗಾಲ್ಯಾಂಡ್ ಮೂಲದ ಯುವತಿ ಮನೆ ಮಾಲೀಕ ಮತ್ತು ಆತನ ಪತ್ನಿ ವಿರುದ್ಧ ದೂರು ನೀಡಿದ್ದಾರೆ.

ವಾಹೆಂಗ್ ಬಾಮ್ ಲಲಿತ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೃತ್ಯಕ್ಕೆ ಆತನ ಪತ್ನಿ ರೊಂಗ್ಸೆನ್ಕಲಾ ಸಾಥ್ ನೀಡಿದ್ದಾಳೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ನಾಗಾಲ್ಯಾಂಡ್‍ಗೆ ಹೋಗಿ ಅಲ್ಲಿಂದ ಇ-ಮೇಲ್ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
2015ರಲ್ಲಿ ಕೆಲಸ ಆರಸಿಕೊಂಡು ಬೆಂಗಳೂರಿಗೆ ಬಂದಿದ್ದಾಗ ರೊಂಗ್ಸೆನ್ಕಲಾ ಎಂಬಾಕೆ ಪರಿಚಯವಾಗಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ನನಗೆ ಹೇಳಿದ್ದಳು. ನಂತರ ನನ್ನನ್ನು ಹೆಚ್‍ಎಸ್‍ಆರ್ ಲೇಔಟ್ ನಲ್ಲಿರುವ ಅವರ ಮನೆಗೆ ಕರೆತಂದು ಒಂದೂವರೆ ವರ್ಷ ಅವರ ಮನೆಯಲ್ಲೇ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈ ವೇಳೆ ನನಗೆ ಅವರ ಮನೆಯಲ್ಲಿಯೇ ಪ್ರತ್ಯೇಕ ರೂಮಿನಲ್ಲಿ ವಾಸಿಸುವಂತೆ ತಿಳಿಸಿದ್ದರು. ರೊಂಗ್ಸೆನ್ಕಲಾ ಜೊತೆ ಆಕೆಯ ಗಂಡ ವಾಹೆಂಗ್ ಲಲಿತ್ ಸಿಂಗ್ ಹಾಗೂ ಇಬ್ಬರೂ ಮಕ್ಕಳು ವಾಸಿಸುತ್ತಿದ್ದರು.

ನಾನು ರೂಮಿನಲ್ಲಿದ್ದಾಗ ವಾಹೆಂಗ್ ಅನೇಕ ಬಾರಿ ನನ್ನ ರೂಮಿಗೆ ಅಕ್ರಮವಾಗಿ ಪ್ರವೇಶಿಸಿ ಒತ್ತಾಯ ಪೂರ್ವಕವಾಗಿ ನನ್ನನ್ನು ಹಿಡಿದುಕೊಂಡು ನನ್ನ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮನೆ ಕೆಲಸ ಮಾಡಿದ್ದಕ್ಕೆ ಪ್ರತಿ ತಿಂಗಳು ಅವರು 6 ಸಾವಿರ ರೂ.ಕೊಡುತ್ತಿದ್ದರು. ಆದರೆ ಏಳನೇ ತಿಂಗಳ ಸಂಬಳವನ್ನು ಅವರು ನನಗೆ ನೀಡಲಿಲ್ಲ. ನಂತರ ವಾಹೆಂಗ್ ವರ್ತನೆ ಬಗ್ಗೆ ಆತನ ಪತ್ನಿ ಹತ್ತಿರ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಯುವತಿ ತಿಳಿಸಿದ್ದಾರೆ.

ನನ್ನ ಮಾತು ಅವರು ಕೇಳದಿದ್ದಾಗ ನಾನು ಬೆಂಗಳೂರಿನಲ್ಲಿರುವ ನನ್ನ ಸಂಬಂಧಿಕರ ಸಹಾಯದಿಂದ ಮರಳಿ ನಾಗಾಲ್ಯಾಂಡ್‍ಗೆ ವಾಪಸ್ ಬಂದಿದ್ದೇನೆ. ಮನೆ ಕೆಲಸ ಮಾಡುವಾಗ ನನಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿರುವ ವಾಹೆಂಗ್ ಹಾಗೂ ರೊಂಗ್ಸೆನ್ಕಲಾ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

Comments

Leave a Reply

Your email address will not be published. Required fields are marked *