ಪೊಲೀಸ್ ಠಾಣೆ ಮುಂದೆಯೇ ಮದ್ವೆ- ಅಂತರ ಕಾಯ್ದುಕೊಂಡ ಜೋಡಿ

– ವಧು, ವರ ಬಿಟ್ರೆ ಸಂಬಂಧಿಕರೂ ಇರಲಿಲ್ಲ

ಭುವನೇಶ್ವರ: ಕೊರೊನಾ ವೈರಸ್ ಜಗತ್ತಿನಾದ್ಯಂತ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದರಿಂದ ಸಭೆ, ಸಮಾರಂಭ, ಮದುವೆ ಮುಂತಾದ ಕಾರ್ಯಕ್ರಮಗಳು ಕೂಡ ರದ್ದಾಗಿದೆ. ಅನೇಕ ಜೋಡಿಗಳು ಕೊರೊನಾದ ಲಾಕ್‍ಡೌನ್ ಮಧ್ಯೆಯೂ ತಮ್ಮ ಪೋಷಕರ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಒಡಿಶಾದಲ್ಲಿ ಜೋಡಿಯೊಂದು ಪೊಲೀಸ್ ಠಾಣೆ ಮುಂದೆಯೇ ಮದುವೆಯಾಗಿದ್ದಾರೆ.

ಜೋಡಿಯ ಸರಳ ವಿವಾಹದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಧು-ವರ ಇಬ್ಬರೂ ಯಾವುದೇ ಮದುವೆ ಉಡುಪನ್ನು ಧರಿಸದೇ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರೇ ಮುಂದೆ ನಿಂತು ಜೋಡಿಗೆ ಮದುವೆ ಮಾಡಿಸಿದ್ದಾರೆ.

ವಿಶೇಷ ಎಂದರೆ ಹುಡುಗ-ಹುಡುಗಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಾಹವಾಗಿದ್ದಾರೆ. ತುಂಬಾ ಹತ್ತಿರ ಹೋಗದೆ ಅಂತರ ಕಾಯ್ದುಕೊಂಡು ವರ-ವಧುವಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ. ವಿವಾಹದ ಬಳಿಕ ಠಾಣೆಯ ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದು ವಧು-ವರರು ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಪೊಲೀಸರು, ಕೆಲವು ಸ್ಥಳೀಯರಿಗೆ ಜೋಡಿ ಸಿಹಿ ಹಂಚಿದ್ದಾರೆ. ಅಲ್ಲದೇ ತಾವೂ ಪರಸ್ಪರ ಸಿಹಿ ತಿನ್ನಿಸಿದ್ದಾರೆ.

ಈ ಮದುವೆಯಲ್ಲಿ ವಧು-ವರ ಬಿಟ್ಟರೆ ಸಂಬಂಧಿಕರೂ ಕೂಡ ಭಾಗಿಯಾಗಿರಲಿಲ್ಲ. ವಿವಾಹವಾದ ನಂತರ ಪೊಲೀಸರು ಅವರಿಗೆ ಮಾಸ್ಕ್ ನೀಡಿದ್ದಾರೆ. ಬಳಿಕ ನವ ಜೋಡಿ ಮಾಸ್ಕ್ ಧರಿಸಿ ಖುಷಿಯಿಂದ ಮನೆಗೆ ಹೋಗಿದ್ದಾರೆ. ಪೊಲೀಸರ ನೆರವಿನೊಂದಿಗೆ ನಡೆದ ಈ ಮದುವೆ ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *