ಬಾತ್ ರೂಮಿನಲ್ಲಿ ಬೆತ್ತಲಾಗಿದ್ದ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ

ಲಕ್ನೋ: ದಂಪತಿಯ ಮೃತದೇಹ ಬಾತ್ ರೂಂನಲ್ಲಿ ಬೆತ್ತಲಾಗಿ ಪತ್ತೆಯಾಗಿರುವ ಘಟನೆ ಘಾಜಿಯಾಬಾದ್ ನ ಇಂದಿರಾಪುರಂನ ಜ್ಞಾನ ಖಾಂಡ್ ಪ್ರದೇಶದಲ್ಲಿ ನಡೆದಿದೆ.

ನೀರಜ್ ಸಿಂಘಾನಿಯಾ (38), ಅವರ ಪತ್ನಿ ರುಚಿ ಸಿಂಘಾನಿಯಾ(35) ಮೃತಪಟ್ಟ ದಂಪತಿ. ಇವರು 4 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಂದಿರಾಪುರಂ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ನೀರಜ್ ಸಿಂಘಾನಿಯಾ ಒಬ್ಬ ಮ್ಯಾಟ್ರಿಕ್ಸ್ ಸೆಲ್ಯೂಲಾರ್ ಸರ್ವೀಸ್ ನ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

ಶುಕ್ರವಾರ ಹೋಳಿ ಆಚರಣೆ ಮುಗಿಸಿ ದಂಪತಿ ಸ್ನಾನಕ್ಕೆ ತೆರಳಿ ಬಾತ್ ರೂಂನಲ್ಲೇ ಮೃತಪಟ್ಟಿದ್ದಾರೆ. ಈ ದಂಪತಿಯ ಸಾವು ಅನುಮಾನಾಸ್ಪದವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಎಚ್.ಎನ್ ಸಿಂಗ್ ತಿಳಿಸಿದ್ದಾರೆ.

ಹೋಳಿ ಹಬ್ಬ ಆಚರಿಸಿ ದಂಪತಿ ಕುಟುಂಬ ಸಮೇತರಾಗಿ ಊಟಕ್ಕೆ ಹೋಗಲು ಸಿದ್ಧರಾಗಲು ಸ್ನಾನದ ಕೋಣೆಗೆ ಹೋಗಿದ್ದಾರೆ. ಆದರೆ ತುಂಬಾ ಸಮಯದವರೆಗೆ ಹೊರಗೆ ಬಾರಲಿಲ್ಲ. ನಂತರ ನೀರಜ್ ತಂದೆ ಪ್ರೇಮ್ ಪ್ರಕಾಶ್ ಬಾಗಿಲು ಬಡಿದು ಕರೆದಿದ್ದಾರೆ. ಆದರೆ ದಂಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಸುಮಾರು ಅರ್ಧ ಗಂಟೆಯಾದ ಬಳಿಕ ಮತ್ತೆ ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆಯಲಿಲ್ಲ.

ದಂಪತಿ ಕೊಠಡಿಯ ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಆದ್ದರಿಂದ ತಂದೆ ನೀರಜ್ ಸಹೋದರನಿಗೆ ಹೇಳಿದ್ದಾರೆ. ಅವರು ಕೂಡ ಬಾಗಿಲು ತೆಗೆಯಲು ಪ್ರಯತ್ನಿಸಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ವೆಂಟಿಲೇಟರ್ ನಲ್ಲಿ ಇಣುಕಿ ನೋಡಿದಾಗ ಇಬ್ಬರು ಬೆತ್ತಲಾಗಿ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ನಂತರ ಕುಟುಂಬದವರು ಸೇರಿ ಬಾಗಿಲು ಮುರಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಂಪತಿಯನ್ನು ಪರೀಕ್ಷೆ ಮಾಡಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ನಡೆದ ಸ್ಥಳದಲ್ಲಿ ವಿದ್ಯುತ್ ಪ್ರವಹಿಸಿದ, ವಿಷಾನಿಲ ಹೊರಸೂಸಿದ, ಉಸಿರುಗಟ್ಟಿ ಮೃತಪಟ್ಟಂತಹ ಯಾವುದೇ ಸುಳಿವು ಕಂಡು ಬಂದಿಲ್ಲ. ಸ್ಥಳದಲ್ಲಿದ್ದ ಬಕೆಟ್ ಖಾಲಿಯಾಗಿದ್ದವು. ಗ್ಯಾಸ್ ಗೀಸರ್ ಆಫ್ ಆಗಿತ್ತು. ಅವರ ಸಾವಿಗೆ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ನೀರಜ್ ತಂದೆ ಹೇಳಿದ್ದಾರೆ.

ಹೋಳಿ ಹಬ್ಬಕ್ಕೆಂದು ರುಚಿಯವರ ಪೋಷಕರೂ ಕೂಡಾ ನೀರಜ್ ಮನೆಗೆ ಆಗಮಿಸಿದ್ದರು. ಸದ್ಯಕ್ಕೆ ಮೃತದೇಹವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *