ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋಡಿ ಪತಿ ನೇಣಿಗೆ ಶರಣು

ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹಲತಗಾ ಗ್ರಾಮದಲ್ಲಿ ನಡೆದಿದೆ.

ಸಿಂದಗಿ ತಾಲೂಕಿನ ಯಲಗೂಡ ತಾಂಡಾದ ನಿವಾಸಿ ರವಿ ಆರ್. ರಾಠೋಡ (25) ಮತ್ತು ಪತ್ನಿ ಅಂಜಲಿ (24) ಆತ್ಮಹತ್ಯೆಗೆ ಶರಣಾದ ದಂಪತಿ. ರವಿ ಅಲತಗಾ ಗ್ರಾಮದ ಬಳಿಯ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಬಂದಿದ್ದನು. ಇದೇ ಫ್ಯಾಕ್ಟರಿಯಲ್ಲಿ ಅಂಜಲಿ ಕೂಡ ಕೆಲಸ ಮಾಡುತ್ತಿದ್ದರು. ಹೀಗೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿ ಮದುವೆ ಕೂಡ ಆಗಿದ್ದರು.

ದಂಪತಿಗಳ ಸಂಸಾರ ಜೀವನ ಉತ್ತಮವಾಗಿದ್ದು, ಆಗಾಗ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಡುತ್ತಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಇಬ್ಬರೂ ಮತ್ತೆ ಜಗಳವಾಡಿಕೊಂಡು ರವಿ ಮನೆಯಿಂದ ಹೊರ ಹೋಗಿದ್ದನು. ಪತಿ ಮನೆಯಿಂದ ಹೊರ ಹೋದ ತಕ್ಷಣ ಅಂಜಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ರವಿ ಮರಳಿ ಮನೆಗೆ ಬಂದಾಗ ಹೆಂಡತಿ ಅಂಜಲಿ ನೇಣು ಹಾಕಿಕೊಂಡಿದ್ದನ್ನು ನೋಡಿದ್ದು, ಇದರಿಂದ ಹೆದರಿದ ರವಿ ಅಲ್ಲಿಂದ ಪರಾರಿಯಾಗಿದ್ದನು.

ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಅಂಜಲಿಯ ಶವವನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ನಡೆಯಬೇಕು ಅನ್ನುವಷ್ಟರಲ್ಲಿ ಅಲತಗಾ ಗ್ರಾಮದ ಬಳಿಯ ಮರವೊಂದರಲ್ಲಿ ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರಿಗೆ ಮಾಹಿತಿ ತಲುಪುತ್ತದೆ.

ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಹೋಗಿ ರವಿ ಮೃತದೇಹವನ್ನೂ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ತಂದು ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *