ಮಾರಲು ಬಂದಿದ್ದು ಉದ್ದಿನ ಬೇಳೆ-ನಕಲಿ ಚಿನ್ನ ನೀಡಿ 91 ಸಾವಿರದೊಂದಿಗೆ ದಂಪತಿ ಎಸ್ಕೇಪ್

ಗದಗ: ಉದ್ದಿನ ಬೇಳೆ ಮಾರಾಟ ನೆಪದಲ್ಲಿ ನಕಲಿ ಚಿನ್ನ ನೀಡಿ ಹಣ ಎಗರಿಸಿ, ಕಿಲಾಡಿ ದಂಪತಿ ಎಸ್ಕೆಪ್ ಆಗಿರುವ ಘಟನೆ ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ನಡೆದಿದೆ.

ಉದ್ದಿನ ಬೇಳೆ ಮಾರಾಟ ಮಾಡಲು ಬಂದಿದ್ದ ಚಾಲಾಕಿ ದಂಪತಿ ಹಿರೇಹಂದಿಗೋಳ ಗ್ರಾಮದ ನಿವಾಸಿ ಈರಮ್ಮ ಅವರಿಗೆ ಅಸಲಿ ಚಿನ್ನ ಎಂದು ನಂಬಿಸಿ ನಕಲಿ ನೀಡಿ ಮೋಸ ಮಾಡಿದ್ದಾರೆ. ದಂಪತಿಯ ಬಣ್ಣದ ಮಾತಿಗೆ ಮರುಳಾಗಿ ನಕಲಿ ಚಿನ್ನಕ್ಕೆ ಬರೋಬ್ಬರಿ 91 ಸಾವಿರ ಹಣ ಕೊಟ್ಟು ಮಹಿಳೆ ಮೋಸ ಹೋಗಿ ಕಣ್ಣೀರಿಡುತ್ತಿದ್ದಾರೆ.

ಜಮೀನು ಲಾವಣಿ ಮಾಡಲು ಬ್ಯಾಂಕ್‍ನಿಂದ ಮಹಿಳೆ ಹಣ ತಂದಿದ್ದರು. ಇದೇ ವೇಳೆ ಗ್ರಾಮಕ್ಕೆ ಉದ್ದಿನ ಬೇಳೆ ಮಾರುವ ನೆಪದಲ್ಲಿ ಬಂದಿದ್ದ ದಂಪತಿ ಮಹಿಳೆ ಮನೆಗೂ ಮಾರಾಟಕ್ಕೆ ತೆರಳಿದ್ದರು. ಆಗ ಮಕ್ಕಳಿಗೆ ಕಿಡ್ನಿ ಸಮಸ್ಯೆ ಇದೆ. ಕಡಿಮೆ ಹಣದಲ್ಲಿ ಹತ್ತು ತೊಲೆ (100 ಗ್ರಾಂ) ಚಿನ್ನ ನೀಡುವುದಾಗಿ ಮಹಿಳೆಗೆ ಆಸೆ ತೋರಿಸಿದ್ದಾರೆ. ದಂಪತಿಯನ್ನ ನಂಬಿ ಮಹಿಳೆ ಬ್ಯಾಂಕ್‍ನಿಂದ ತಂದಿದ್ದ ಹಣ ನೀಡಿ ಚಿನ್ನ ಖರೀದಿಸಿದ್ದಾರೆ.

ಚಿನ್ನವನ್ನು ಪರೀಕ್ಷಿಸಿ ನೋಡಿದಾಗ ನಕಲಿ ಎಂದು ತಿಳಿದು ಮಹಿಳೆ ಹಾಗೂ ಆಕೆಯ ಕುಟುಂಬಕ್ಕೆ ಶಾಕ್ ಆಗಿದೆ. ಕಡಿಮೆ ಹಣದಲ್ಲಿ ಚಿನ್ನ ಸಿಗುತ್ತಿದೆ ಎಂದು ಆಸೆಗೆ ಬಿದ್ದು ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಸದ್ಯ ಈ ಸಂಬಂಧ ಮಹಿಳೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಖರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *