ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

ಗುಹಾವಟಿ: ಅಕ್ರಮ ಸಂಬಂಧ ಹೊಂದಿದ್ದಾರೆಂದು ಗ್ರಾಮಸ್ಥರು ಜೋಡಿಯನ್ನು ಇಡೀ ರಾತ್ರಿ ಥಳಿಸಿ ಮಹಿಳೆಯ ತಲೆ ಬೋಳಿಸಿದ ಘಟನೆ ಭಾನುವಾರ ಅಸ್ಸಾಂನ ನಾಗಂನ್‍ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಜುಮುರ್ಮೂರ್ ನಲ್ಲಿ ಗ್ರಾಮಸ್ಥರು ಆ ಜೋಡಿಯನ್ನು ಥಳಿಸಲು ಶುರು ಮಾಡಿದ್ದರು. ಭಾನುವಾರ ಬೆಳಗ್ಗೆ ಗಂಭೀರವಾಗಿ ಗಾಯಗೊಂಡಿದ್ದ ಜೋಡಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಹಲ್ಲೆಗೊಳಗಾದ ಜೋಡಿಯನ್ನು ಕತಿಯಾಟೋಲಿಯಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ನಾಗಂನ್‍ನ ಭೋಗೇಶ್ವರಿ ಪುಕನಾನಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಪಡೆದ ಬಳಿಕ ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಜೋಡಿಯನ್ನು ನಮಗೆ ಒಪ್ಪಿಸಿದ್ದರು. ಆ ಜೋಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಸ್‍ಪಿ ರಿಪುಲ್ ದಾಸ್ ಹೇಳಿದ್ದಾರೆ.

ಪಕ್ಕದ ತುಬುಕಿ ಗ್ರಾಮದ ವ್ಯಕ್ತಿಯೊಬ್ಬ ಶನಿವಾರ ರಾತ್ರಿ ಮಹಿಳೆ ಮನೆಗೆ ಹೋಗಿದ್ದಾನೆ. ಆಗ ಗ್ರಾಮಸ್ಥರು ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಗ್ರಾಮಸ್ಥರು ಆತ ಮತ್ತು ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಕೊನೆಗೆ ಗ್ರಾಮದ ಮಹಿಳೆಯೊಬ್ಬರು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ತಲೆ ಬೊಳಿಸಿದ್ದಾರೆ. ಅಲ್ಲದೇ ಅವರ ಬಟ್ಟೆ ಹರಿದು ರಾತ್ರಿಯಿಡಿ ಕಿರುಕುಳ ನೀಡಿದ್ದಾರೆ.

ಇಬ್ಬರಿಗೂ ಮದುವೆಯಾಗಿದೆ. ಇಬ್ಬರು ಅಕ್ರಮ ಸಂಬಂಧ ಹೊಂದುವ ಮೂಲಕ ತಮ್ಮ ಜೀವನ ಸಂಗಾತಿಗೆ ಮೋಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಗ್ರಾಮಸ್ಥರು ಅವರನ್ನು ಥಳಿಸಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ನಡೆಸಿ ನಂತರ ಕೇಸ್ ದಾಖಲಿಸಿಕೊಳ್ಳಲಿದ್ದೇವೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *