ನಿಮ್ಮ ಕಥೆ ಏನಾಗುತ್ತೆ ಗೊತ್ತಾ ಅಂತಾ ಎಸ್‍ಐ ಧಮ್ಕಿ: ಪ್ರೀತಿಸಿ ಮದ್ವೆಯಾದ ಜೋಡಿ ಆರೋಪ

ಚಿತ್ರದುರ್ಗ: ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಅವರಲ್ಲಿತ್ತು. ಅದಕ್ಕಾಗಿ ಪೋಷಕರ ವಿರೋಧದ ನಡುವೆಯೂ ಮದ್ವೆ ಕೂಡ ಮಾಡ್ಕೊಂಡಿದ್ದಾರೆ. ಎಲ್ಲಾ ಸರಿಯಾಯಿತು ಅಂದುಕೊಳ್ಳುವಾಗ್ಲೇ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ನಿಮ್ಮಿಬ್ಬರನ್ನು ದೂರ ಮಾಡ್ತೀನಿ. ನೀವಿಬ್ಬರೂ ಹೇಗೆ ಜೊತೆಯಾಗಿ ಇರ್ತೀರಿ. ನಿಮ್ಮನ್ನ ಏನ್ ಮಾಡ್ತೀನಿ ನೋಡ್ತಿರಿ ಅಂತೆಲ್ಲಾ ಆವಾಜ್ ಹಾಕಿ ವಿಲನ್ ಆಗಿದ್ದಾರೆ ಅನ್ನೋ ಆರೋಪವೊಂದು ಕೇಳಿಬಂದಿದೆ.

ದಾವಣೆಗೆರೆಯ ಗಂಗೊಂಡನಹಳ್ಳಿ ಯುವಕ ಮಹಾರುದ್ರ ಹಾಗೂ ಹೊಳಲ್ಕೆರೆಯ ದೊಗ್ಗನಾಳ್ ಗ್ರಾಮದ ವನಿತಾರಾಣಿ ಹಲವು ವರ್ಷಗಳಿಂದ ಪ್ರೀತಿಸ್ತಿದ್ರು. ಇಬ್ಬರ ಪ್ರೀತಿಗೆ ಯುವತಿ ಮನೆಯವರು ಅಡ್ಡಿ ಪಡಿಸಿದ್ದರಿಂದ ಪ್ರೇಮಿಗಳು ತಿರುಪತಿಗೆ ಹೋಗಿ ಮದ್ವೆಯಾಗಿ ಬಂದಿದ್ದಾರೆ. ಈಗ ಮದ್ವೆಯಾಗಿರೋ ನೂತನ ಜೋಡಿಗಳ ಪಾಲಿಗೆ ಹೊಳಲ್ಕೆರೆ ಎಸ್‍ಐ ಮಹೇಶ್ ವಿಲನ್ ಆಗಿದ್ದಾರೆ.

ಮದ್ವೆ ಬಳಿಕ ಎರಡೂ ಕಡೆಯರು ರಾಜಿ ಸಂಧಾನ ಮಾಡಿಸಿದ್ದಾರೆ. ಇಷ್ಟಕ್ಕೆ ಮುಗೀತು ಅನ್ನೋವಷ್ಟರಲ್ಲಿ ಯುವತಿ ತಂದೆ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಅಂತ ಕೇಸ್ ಹಾಕಿದ್ದಾರೆ. ಬಳಿಕ ಇಬ್ಬರು ಪ್ರೇಮಿಗಳು ಸ್ಟೇಷನ್‍ಗೆ ಬರೋದು ಸ್ವಲ್ಪ ತಡವಾಗಿದ್ದಕ್ಕೆ ಎಸ್‍ಐ ಮಹೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಗತಿ ಏನಾಗುತ್ತೆ ಗೊತ್ತಾ ಅಂತ ಬೆದರಿಕೆ ಹಾಕಿದ್ದಾರೆ. ಇದರಿಂದ ಭೀತಿಗೊಂಡಿರೋ ನವವಿವಾಹಿತ ಜೋಡಿ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.

ಗಂಡ-ಹೆಂಡತಿ ಇಬ್ಬರನ್ನೂ ದೂರ ಮಾಡುವಂತಹ ಶಕ್ತಿ ನಮಗಿದೆ. ಅಂತಹ ಕೇಸ್ ಗಳನ್ನು ನಿಮ್ಮ ಮೇಲೆ ರಿಸ್ಟರ್ ಮಾಡ್ತೀವಿ. ಇದೇನು ನನಗೆ ದೊಡ್ಡ ಕೇಸಲ್ಲ. ಇದ್ನ ಏನು ಮಾಡಬೇಕೆಂದು ನನಗೆ ಗೊತ್ತಿದೆ ಅಂತಾ ನವವಿವಾಹಿತ ಮಹಾರುದ್ರ ಎಸ್ ಐ ವಿರುದ್ಧ ಆರೋಪ ಮಾಡಿದ್ದಾರೆ.

ರಕ್ಷಣೆ ನೀಡುವ ಪೊಲಿಸ್ ಠಾಣೆಯಲ್ಲಿಯೇ ಇಂತಹ ಮಾತುಗಳನ್ನು ಕೇಳಿಸಿಕೊಂಡಾಗ ಅಲ್ಲಿ ಹೋಗಕ್ಕೆ ನಮಗೆ ಸ್ವಲ್ಪ ಹಿಂಜರಿಕೆಯಾಗುತ್ತದೆ. ತಂದೆ ಹಾಗೂ ಪೊಲೀಸರ ಕಿರುಕುಳ ಇಲ್ಲದೆನೇ ನಾವು ನೆಲ್ಲದಿಯಾಗಿ ಜೀವನ ಮಾಡಲು ನಮಗೆ ಅವಕಾಶ ಬೇಕು ಅಂತಾ ಯುವತಿ ವನಿತಾರಾಣಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *