ಕೊನೆಯಲ್ಲಿ ಜಡೇಜಾ ಸಿಕ್ಸರ್‌, ಬೌಂಡರಿ – ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ: ಮೋಹಿತ್‌ ಶರ್ಮಾ

ಅಹಮದಾಬಾದ್‌: 16ನೇ ಆವೃತ್ತಿಯ ಐಪಿಎಲ್‌ (IPL 2023) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ (CSK) 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಗುಜರಾತ್‌ ಟೈಟಾನ್ಸ್‌ (GT) 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿದೆ. ಐಪಿಎಲ್‌ ಮುಗಿದು 3 ದಿನ ಕಳೆದರೂ ಕೊನೇ ಕ್ಷಣದಲ್ಲಿ ತಂಡದಲ್ಲಿ ಆದ ಕೆಲವೊಂದು ಬದಲಾವಣೆಗಳು ಇನ್ನೂ ಚರ್ಚೆಯಲ್ಲಿವೆ. ದಿನಕ್ಕೊಂದು ಹೊಸ ಹೇಳಿಕೆಗಳು ಕೇಳಿಬರುತ್ತಿವೆ.

ಹೌದು.. ಮಳೆಕಾಟದಿಂದಾಗಿ ಡಕ್ವರ್ತ್‌ ಲೂಯಿಸ್‌ (DSL) ನಿಯಮದನ್ವಯ ಸಿಎಸ್‌ಕೆ ಫೈನಲ್‌ ಪಂದ್ಯದಲ್ಲಿ ಟೈಟಾನ್ಸ್‌ ವಿರುದ್ಧ 15 ಓವರ್‌ಗಳಲ್ಲಿ 171 ರನ್‌ ಟಾರ್ಗೆಟ್‌ ಪಡೆಯಿತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು. ಬೌಲಿಂಗ್‌ನಲ್ಲಿದ್ದ ಮೋಹಿತ್‌ ಶರ್ಮಾ ಮೊದಲ 4 ಎಸೆತಗಳಲ್ಲಿ ಕೇವಲ 3 ರನ್‌ ನೀಡಿದ್ದರು. ಆದ್ರೆ ಕೊನೆಯ 2 ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರಿಂದ ಸಿಕ್ಸರ್‌, ಬೌಂಡರಿ ಚಚ್ಚಿಸಿಕೊಂಡರು. ಇದರಿಂದಾಗಿ ಗುಜರಾತ್‌ ಟೈಟಾನ್ಸ್‌ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಸಿಎಸ್‌ಕೆ ವಿರುದ್ಧ ಫೈನಲ್​​​​ ಓವರ್​​ನಲ್ಲಿ ತಾನು ಹಾಕಿಕೊಂಡಿದ್ದ ಗೇಮ್​ ಪ್ಲ್ಯಾನ್‌ ಬಗ್ಗೆ ಗುಜರಾತ್‌ ಟೈಟಾನ್ಸ್‌ ಆಟಗಾರ ಮೋಹಿತ್‌ ಶರ್ಮಾ ಮಾತನಾಡಿದ್ದು, ಆ ದಿನ ಇಡೀ ರಾತ್ರಿ ನಾನು ಏನ್‌ ಮಾಡ್ಬೇಕು ಅಂತಾ ಯೋಚಿಸುತ್ತಲೇ ಇದ್ದೆ, ನಿದ್ರೆ ಮಾಡೋಕೆ ಆಗ್ತಿಲ್ಲಾ ಅಂತಾ ಹೇಳಿದ್ದಾರೆ. ಇದನ್ನೂ ಓದಿ: IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

ಅಂತಿಮ ಓವರ್​ನಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಗೊಂದಲ ಇರಲಿಲ್ಲ. ನೆಟ್ಸ್​​​ನಲ್ಲೂ ಲೆಕ್ಕಾಚಾರ ಹಾಕಿಕೊಂಡು ಅಭ್ಯಾಸ ಮಾಡಿದ್ದೆ. ಈ ಹಿಂದೆಯೂ ಇಂತಹ ಒತ್ತಡಗಳಲ್ಲಿ ಬೌಲಿಂಗ್​ ಮಾಡಿದ ಅನುಭವ ನನಗಿತ್ತು. ನಾಯಕ ಹಾರ್ದಿಕ್​ ಪಾಂಡ್ಯಗೆ ಓವರ್​​​ನ ಎಲ್ಲಾ ಬಾಲ್​​ಗಳನ್ನೂ ಯಾರ್ಕರ್ ಹಾಕುತ್ತೇನೆ ಎಂದು ಹೇಳಿದ್ದೆ. ನನ್ನ ಬಲವಾದ ನಂಬಿಕೆಯಿಂದ ಬೌಲಿಂಗ್‌ ಮಾಡಿದ್ದೆ. ಆದರೂ ನನ್ನಿಂದ ಸೋಲಾಗಿದ್ದು, ಬೇಸರ ಉಂಟು ಮಾಡಿತು ಎಂದು ಹೇಳಿದ್ದಾರೆ.

ಸೋತ ನಂತರ ನನಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಸೋತಿದ್ದನ್ನೇ ಹೆಚ್ಚು ಯೋಚಿಸುತ್ತಿದ್ದೆ. ಕೊನೆಯಲ್ಲಿ ಆ ಎಸೆತ ಎಸೆದಿದ್ದರೆ ನಾವು ಗೆಲ್ಲುತ್ತಿದ್ದೆವಾ? ಹೀಗೆ ಮಾಡಿದ್ದರೆ, ಗೆಲ್ಲುತ್ತಿದ್ದೆವಾ? ಎಂಬುದನ್ನೇ ಹೆಚ್ಚು ಯೋಚಿಸುತ್ತಿದ್ದೆ. ಇದು ನಿಜವಾಗಿಯೂ ಒಳ್ಳೆಯ ಭಾವನೆ ಅಲ್ಲ. ಆದ್ರೆ ಎಲ್ಲೋ ಒಂದು ಕಡೆ ನನ್ನಿಂದಲೇ ಸೋತಿದ್ದು, ಎನಿಸುತ್ತಿದೆ. ಸದ್ಯ ಅದರಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೋಹಿತ್​ ಶರ್ಮಾ ಪರ್ಪಲ್​ ಕ್ಯಾಪ್​ ರೇಸ್​ನಲ್ಲಿದ್ದರು. 14 ಪಂದ್ಯಗಳಲ್ಲಿ 27 ವಿಕೆಟ್​ ಪಡೆದಿದ್ದರು. ಇದರೊಂದಿಗೆ 1 ವಿಕೆಟ್​ ಅಂತರದಿಂದ ಪರ್ಪಲ್​ ಕ್ಯಾಪ್​ನಿಂದ ವಂಚಿತರಾದರು. ಫೈನಲ್​ ಪಂದ್ಯದಲ್ಲೂ ಪ್ರಮುಖ 3 ವಿಕೆಟ್​ ಉರುಳಿಸಿ ಗಮನ ಸೆಳೆದಿದ್ದರು.