ಸಾಸ್ತಾನ ಟೋಲ್ ಸಿಬ್ಬಂದಿ ಜೊತೆ ಮಂಡ್ಯದ ಸೋಂಕಿತ ಮಾತು – 6 ಮಂದಿ ಕ್ವಾರಂಟೈನ್

– ಪೆಟ್ರೋಲ್ ಪಂಪ್ ಬಳಿ ಸ್ನಾನ, ತಿಂಡಿ
– ದ.ಕ.ಜಿಲ್ಲೆಗೆ ಬಂದು, ಅಲ್ಲಿಂದ ಕೊಡಗಿನಿಂದ ಮಂಡ್ಯ ಪಯಣ

ಉಡುಪಿ: ಮುಂಬೈನಿಂದ ಹೊರಟ ಖರ್ಜೂರ ಸಾಗಿಸುವ ಲಾರಿ ಹತ್ತಿ ಮಂಡ್ಯಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಲಾರಿ ಪಾಸ್ ಆಗಿದ್ದ ಟೋಲ್ ಗೇಟ್‍ನ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಲಾರಿ ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿಯ ವಿಡಿಯೋ ಪತ್ತೆಯಾಗಿದೆ. ಲಾರಿ ಒಳಗಿದ್ದ ವ್ಯಕ್ತಿ ತೆಕ್ಕಟ್ಟೆ ಸಮೀಪದ ಶಿವಪ್ರಸಾದ್ ಪೆಟ್ರೋಲ್ ಪಂಪ್ ಬಳಿ ಇಳಿದು ಸ್ನಾನ ಮುಗಿಸಿದ್ದು, ನಂತರ ಅಲ್ಲೇ ತಿಂಡಿ ತಿಂದಿದ್ದಾರೆ. ಆಮೇಲೆ ಲಾರಿ ಸಾಸ್ತಾನ ಟೋಲ್ ಗೇಟ್ ಪಾಸ್ ಆಗಿ, ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ. ಅಲ್ಲಿಂದ ಕೊಡಗಿಗೆ ಬಂದು ಅಲ್ಲಿಂದ ಮಂಡ್ಯ ತಲುಪಿದ್ದಾರೆ. ಸಾಸ್ತಾನ ಟೋಲ್ ಗೇಟ್‍ನಲ್ಲಿ ಸೋಂಕಿತ ವ್ಯಕ್ತಿ ಟೋಲ್ ಸಿಬ್ಬಂದಿಯ ಜೊತೆ ಮಾತನಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಟೋಲ್ ನಲ್ಲಿ ಕೆಲಸ ಮಾಡುವ ಆರು ಮಂದಿಯನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಪೆಟ್ರೋಲ್ ಪಂಪ್ ನಲ್ಲಿದ್ದ ಏಳು ಮಂದಿಯನ್ನು ಕಳೆದ ರಾತ್ರಿಯೇ ಪೊಲೀಸರು ಕ್ವಾರಂಟೈನ್ ಗೆ ಹಾಕಿದ್ದರು. ಪೆಟ್ರೋಲ್ ಪಂಪ್ ಅನ್ನು ಸಹ ಪೊಲೀಸರು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಿದ್ದಾರೆ.

ಲಾರಿಯಲ್ಲಿ ಬದಲಿ ಡ್ರೈವರ್, ಕ್ಲೀನರ್ ರೀತಿ ವರ್ತನೆ ಮಾಡಿದ್ದ ಸೋಂಕಿತ ಅವಿತು ಕುಳಿತಿರಲಿಲ್ಲ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ. ಖರ್ಜೂರದ ಲಾರಿ ಸಂಪೂರ್ಣ ಪ್ಯಾಕ್ ಆಗಿದ್ದರಿಂದ ವ್ಯಕ್ತಿ ಚಾಲಕನ ಪಕ್ಕದಲ್ಲೇ ಕುಳಿತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *