ಕೊರೊನಾ 1 ಲಕ್ಷ-67 ದಿನ, 2 ಲಕ್ಷಕ್ಕೆ 11 ದಿನ, 3 ಲಕ್ಷ ಗಡಿ ದಾಟಿದ್ದು 4 ದಿನದಲ್ಲಿ.!

ನವದೆಹಲಿ: ಕೊರೊನಾ ತೀವ್ರತೆ ಎಷ್ಟಿದೆ ಎಂದು ಗೊತ್ತಾಗಬೇಕಾದರೆ ನೀವು ಈ ಲೆಕ್ಕಾಚಾರ ನೋಡಲೇಬೇಕು. ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜನರು ಆತಂಕಕ್ಕೀಡಾಗುವ ಅಂಕಿ ಅಂಶವನ್ನು ಮುಂದಿಟ್ಟಿದ್ದಾರೆ. ಈ ಮೂಲಕ ಪರಿಸ್ಥಿತಿಯ ತೀವ್ರತೆ ಎಷ್ಟಿದೆ ಎನ್ನುವುದನ್ನು ಭಾರತದ ಜನರಿಗೆ ಅರ್ಥ ಮಾಡಿಸಲು ಯತ್ನಿಸಿದ್ದಾರೆ.

ಅರ್ಧ ತಾಸಿನ ಭಾಷಣದಲ್ಲಿ ಮೋದಿ, ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೊದಲ 1 ಲಕ್ಷ ದಾಟಲು 67 ದಿನ ಬೇಕಾಯಿತು. ನಂತರದ 11 ದಿನದಲ್ಲಿ 1 ಲಕ್ಷ ಜನರ ಸೇರ್ಪಡೆಯಾಗುವ ಮೂಲಕ ಈ ಸಂಖ್ಯೆ 2 ಲಕ್ಷ ದಾಟಿತು. ಆದರೆ ಮತ್ತೆ 1 ಲಕ್ಷ ಜನರನ್ನು ತಗುಲಿ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಲು ಕೇವಲ 4 ದಿನ ಮಾತ್ರ ಬೇಕಾಯಿತು. ಕೊರೊನಾ ವೈರಸ್ ಎಷ್ಟು ವೇಗವಾಗಿ ಹರಡುತ್ತದೆ ಎಂಬುದನ್ನು ಈ ಲೆಕ್ಕಾಚಾರದ ಮೂಲಕವಾದರೂ ಅರ್ಥ ಮಾಡಿಕೊಳ್ಳಿ ಎಂದು ಅವರು ಜನರಿಗೆ ಕಿವಿಮಾತು ಹೇಳಿದರು.

ಕೊರೊನಾ ಸೋಂಕಿತರಲ್ಲಿ ಇದರ ಗುಣಲಕ್ಷಣ ಮೊದಲ ದಿನವೇ ಕಾಣಿಸುತ್ತಿಲ್ಲ. ಈ ಲಕ್ಷಣ ಕಾಣಿಸಿಕೊಳ್ಳಲು ಸುಮಾರು ದಿನ ಬೇಕಾಗುತ್ತದೆ. ಆದರೆ ಒಬ್ಬರಿಗೆ ಸೋಂಕು ತಗುಲಿದರೆ ಒಬ್ಬನಿಂದ 100 ಜನರಿಗೆ ಹರಡುತ್ತೆ. ಈ ಸೋಂಕು ನಿಮ್ಮ ಕಡೆ ವೇಗವಾಗಿ ಬರುತ್ತಿದೆ. ಹಾಗಾಗಿ ಎಲ್ಲರೂ ಎಚ್ಚೆತ್ತುಕೊಳ್ಳಿ ಎಂದರು.

ವೈದ್ಯರು ಹೇಳದ ಔಷಧಿ ಬೇಡ!: ಕೊರೊನಾ ಬಗ್ಗೆ ಕೇಳಿ ಬರುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ. ನೀವು ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಪಡೆಯದೇ ತೆಗೆದುಕೊಳ್ಳಬೇಡಿ. 21 ದಿನ ಲಾಕ್ ಡೌನ್ ತುಂಬಾ ಸುದೀರ್ಘ ಸಮಯ. ನಿಮ್ಮ ಜೀವನ ರಕ್ಷಣೆ, ಕುಟುಂಬದ ರಕ್ಷಣೆಗೆ ಇದೊಂದೇ ಮಾರ್ಗ ಇರೋದು, ನಾವು ಇದನ್ನು ಗೆದ್ದು ಬರುವ ವಿಶ್ವಾಸವಿದೆ. ಆತ್ಮವಿಶ್ವಾಸದಿಂದ ಕಾನೂನು ನಿಯಮ ಪಾಲಿಸಿ. ನಿಮ್ಮ ಮನೆ ಬಾಗಿಲಿಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಆ ರೇಖೆಯನ್ನು ಯಾವುದೇ ಕಾರಣಕ್ಕೂ ದಾಟಬೇಡಿ. ಈ ಮೂಲಕ ನಾವೆಲ್ಲಾ ವಿಜಯ ಸಂಕಲ್ಪದ ಜೊತೆಯಾಗೋಣ. ನಿಮಗೆಲ್ಲಾ ನನ್ನ ಧನ್ಯವಾದ ಎಂದು ಕೈಮುಗಿದು ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *