ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್ ಗರ್ಭಿಣಿ

ನವದೆಹಲಿ: ಏಮ್ಸ್ ವೈದ್ಯನ ಪತ್ನಿ ತುಂಬು ಗರ್ಭಿಣಿಯಲ್ಲೂ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಅವರನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ವೈದ್ಯನ ಪತ್ನಿ ಆರೋಗ್ಯಯುತವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಸೋಂಕು ಬಂದಿರುವುದು ಧೃಡಪಟ್ಟಿತ್ತು. ನಂತರ ಅವರ ಮನೆಯವರನ್ನು ತಪಾಸಣೆ ಮಾಡಲಾಗಿತ್ತು. ಆಗ 39 ವಾರಗಳ ತುಂಬು ಗರ್ಭಿಣಿ ವೈದ್ಯನ ಪತ್ನಿಯಲ್ಲೂ ಕೊರೊನಾ ಪಾಸಿಟಿವ್ ಬಂದಿತ್ತು. ತಕ್ಷಣ ಅವರನ್ನು ಪ್ರತ್ಯೇಕವಾಗಿ ವಿಶೇಷ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ವೈದ್ಯನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ. ಮಗುವಿಗೆ ಯಾವುದೇ ಕೊರೊನಾ ಲಕ್ಷಣ ಕಾಣಿಸಿಕೊಂಡಿಲ್ಲ. ಆದರೂ ಮಗುವನ್ನು ಐಸಿಯುನಲ್ಲಿರಿಸಲಾಗಿದೆ. ಮಗುವಿಗೆ ಯಾವುದೇ ಪರೀಕ್ಷೆಯನ್ನು ಮಾಡಿಲ್ಲ ಎಂದು ವೈದ್ಯರಾದ ನೀರ್ಜಾ ಭಟ್ಲಾ ಹೇಳಿದ್ದಾರೆ.

ಇದೊಂದು ಸವಾಲಿನ ಕೇಸಾಗಿತ್ತು. ಯಾಕೆಂದರೆ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ನಾವು ತುಂಬಾ ಅಂಶಗಳನ್ನು ಪರಿಗಣಿಸಬೇಕಾಗಿತ್ತು. ಆದರೆ ಏಮ್ಸ್ ನಲ್ಲಿ ಹೆರಿಗೆ ಮಾಡುವುದು ಎಂದು ಮೊದಲೇ ನಿರ್ಧರಿಸಲಾಗಿತ್ತು. ಅದಕ್ಕಾಗಿ ಐಸೋಲೇಷನ್ ರೂಮನ್ನೇ ಆಪರೇಷನ್ ಥಿಯೇಟರ್ ಆಗಿ ಬದಲಾಯಿಸಿದ್ದೆವು. ಅದರಂತೆಯೇ ನಾವು ಸಮಯವನ್ನು ವ್ಯರ್ಥ ಮಾಡದೆ ತಕ್ಷಣ ಅವರಿಗೆ ಹೆರಿಗೆ ಮಾಡಿಸಿದ್ದೇವೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ವಿವಿಧ ವಿಭಾಗಗಳ 10 ಮಂದಿ ವೈದ್ಯರ ತಂಡ ವೈದ್ಯನ ಪತ್ನಿಗೆ ಹೆರಿಗೆ ಮಾಡಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗುವಿಗೆ ತಾಯಿಯೇ ಸ್ತನ್ಯಪಾನ ಮಾಡಿಸುತ್ತಿದ್ದಾರೆ. ಮಗುವಿಗೆ ಕೊರೊನಾದ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಮಾತ್ರ ಮಗುವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

Comments

Leave a Reply

Your email address will not be published. Required fields are marked *