ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ 6ನೇ ಬಲಿ- ಗದಗನಲ್ಲಿ ಮೊದಲ ಸಾವು

ಗದಗ: ರಾಜ್ಯದಲ್ಲಿ ಕೊರೊನಾ ತನ್ನ ಕಬಂದಬಾಹುವನ್ನು ಚಾಚುತ್ತಿದ್ದು, ಗದಗನಲ್ಲಿ 6ನೇ ಬಲಿ ಪಡೆದುಕೊಂಡಿದೆ.

ಏಪ್ರಿಲ್ 4ರಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ಏಪ್ರಿಲ್ 7ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಗದಗ ನಗರದ ನಿವಾಸಿಯಾಗಿದ್ದ ರೋಗಿ ನಂಬರ್ 166 ಸಾವನ್ನಪ್ಪಿದ್ದಾರೆ. ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ 181 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಾವನ್ನಪ್ಪಿದ ವೃದ್ಧೆ ಸೇರಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ. ಗದಗ ನಗರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ.

ಇತ್ತೀಚೆಗೆ ಕೊರೊನಾ ಸೋಂಕಿತ ರೋಗಿ ನಂಬರ್ 177 ಸಾವನ್ನಪ್ಪಿದ್ದರು. ಕಲಬುರಗಿಯ ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಕಲಬುರಗಿಯ ಖಾಸಗಿ ಆಸ್ಪತ್ರೆ ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡು ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರು. ಆಗ ಸ್ಯಾಂಪಲ್ ತೆಗೆದುಕೊಂಡಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿತ್ತು.

ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬೀಗ ಹಾಕಲಾಗಿದ್ದು, ಅಲ್ಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ರೋಗಿ ನಂಬರ್ 177 ಅವರಿಗೆ ಹೇಗೆ ಸೋಂಕು ತಗುಲಿತ್ತು ಎನ್ನುವ ಬಗ್ಗೆ ಪೊಲೀಸರು ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *