ಬೆಂಗ್ಳೂರಲ್ಲಿ ಕೊರೊನಾ ಮಿಸ್ಟ್ರಿ, ಒಂದು ಫೋನ್ ಕಾಲ್ – 1 ದಿನದ ಮಗುವಿಗೆ ಕೊರೊನಾ ಬರೋದು ತಪ್ಪಿಸಿತು

ಬೆಂಗಳೂರು: ಒಂದು ಫೋನ್ ಕಾಲ್‍ನಿಂದ ಒಂದು ದಿನದ ಮಗುವಿಗೆ ಕೊರೊನಾ ಪಾಸಿಟಿವ್ ಆಗುವುದು ತಪ್ಪಿದಂತಾಗಿದೆ. ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಣೆ ಮಾಡಲಾಗಿದೆ.

ಪಾದರಾಯನಪುರ ಕೊರೊನಾ ಪಾಸಿಟಿವ್ ರೋಗಿಯಿಂದ ಎರಡನೇ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಮೊದಲಿಗೆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಂತರ ಆತನ ಸಂಪರ್ಕದಲ್ಲಿದ್ದವರ ಮಾಹಿತಿ ತೆಗೆದುಕೊಂಡು ಆರೋಗ್ಯ ಇಲಾಖೆ ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿ ಎರಡನೇ ಪತ್ನಿ ಜೊತೆ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದನು.

ಎಷ್ಟು ಬಾರಿ ಕೇಳಿದರೂ ಆತ ಮಾಹಿತಿ ಬಾಯಿ ಬಿಡಲಿಲ್ಲ. ಕೊನೆಗೆ ಪೊಲೀಸರು ಆತನ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುರುಬರಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನೂ ಅದೇ ಆಸ್ಪತ್ರೆಯಲ್ಲಿ 25 ವರ್ಷದ ತುಂಬು ಗರ್ಭಿಣಿ ಕೂಡ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ. ಆಕೆಗೆ ಹೆರಿಗೆ ದಿನಾಂಕ ಕೂಡ ಹತ್ತಿರ ಬಂದಿತ್ತು. ಕೂಡಲೇ ಎಚ್ಚೆತ್ತ ಇಲಾಖೆ ಮಹಿಳೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ.

ವರದಿ ಮುನ್ನವೇ ಮಹಿಳೆ ಪ್ರಯಾಣ ಮಾಡಿದ್ದ ಆಟೋ, ಅಕ್ಕ ಪಕ್ಕದ ಮನೆಯವರ, ಚಿಕಿತ್ಸೆ ನೀಡಿದ ವೈದ್ಯರ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಹಿಳೆಗೂ ಕೊರೊನಾ ಪಾಸಿಟಿವ್ ವರದಿ ಕೈ ಸೇರಿದೆ. ಇದಕ್ಕೂ ಮುನ್ನ ಅಧಿಕಾರಿಗಳು ಕಾಲ್ ಮಾಹಿತಿ ಆಧರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ದೂರ ಮಾಡಿದ್ದರು. ಈ ಮೂಲಕ ಮಗುವಿಗೆ ಕೊರೊನಾ ಬರುವುದು ತಪ್ಪಿದಂತಾಗಿದೆ.

ಮಹಿಳೆ ಲೋಟಸ್ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಹೀಗಾಗಿ ಆಸ್ಪತ್ರೆಯನ್ನ ಸಹ ಸೀಜ್ ಮಾಡಲಾಗಿದೆ. ಈ ಮೂಲಕ ಮಾಹಿತಿ ಮುಚ್ಚಿಟ್ಟಿದ್ದ ವ್ಯಕ್ತಿಯ ಕಾಲ್ ವಿವರಗಳಿಂದ ಮಗುವಿನ ರಕ್ಷಣೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *