ಗ್ರಾಮಕ್ಕೆ ಯಾರೂ ಬರುವಂತಿಲ್ಲ, ಹೋಗುವಂತಿಲ್ಲ – ಲಕ್ಷ್ಮಣ ರೇಖೆಯಂತೆ ಊರಿಗೆ ದಿಗ್ಭಂಧನ

ಗದಗ: ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಜಿಲ್ಲೆಯ ಕೊಟುಮಚಗಿ ಹಾಗೂ ರೋಣ ತಾಲೂಕಿನ ಗುನಗುಂಡಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ದಿಗ್ಭಂಧನ ಹಾಕಿಕೊಂಡಿದ್ದಾರೆ.

ಇಡೀ ದೇಶವೇ ಲಾಕ್‍ಡೌನ್ ಮಾಡಬೇಕೆಂಬ ಪ್ರಧಾನಿ ಮೋದಿ ಅವರ ಮನವಿಗೆ ಗದಗ ಜಿಲ್ಲೆ ಕೊಟುಮಚಗಿ ಗ್ರಾಮದ ಜನರು ಸಖತ್ ರೆಸ್ಪಾನ್ಸ್ ಮಾಡಿದ್ದಾರೆ. ಇಂದಿನಿಂದ ಏಪ್ರಿಲ್ 14 ರವರೆಗೆ ಕೊಟುಮಚಗಿ ಗ್ರಾಮಕ್ಕೆ ಬೇರೆ ಗ್ರಾಮಗಳ ಜನರು ಬರುವಂತಿಲ್ಲ. ಈ ಗ್ರಾಮದ ಜನರು ಸಹ ಬೇರೆ ಕಡೆ ಹೋಗುವಂತಿಲ್ಲ ಎಂದು ಊರಿಗೆ ಲಕ್ಷ್ಮಣ ರೇಖೆಯ ದಿಗ್ಭಂಧನ ಹಾಕಿಕೊಂಡಿದ್ದಾರೆ.

ಪ್ರವೇಶ ಮಾಡುವಂತಹ ಎಲ್ಲ ರಸ್ತೆಗಳಿಗೆ ಅಡ್ಡಲಾಗಿ, ಚಕ್ಕಡಿ, ಟ್ರ್ಯಾಕ್ಟರ್‌ನ ಟ್ರಾಲಿ ಹಾಗೂ ಗುಂಡಿ ತೆಗೆದು ರಸ್ತೆ ಬಂದ್ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರು ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಊರಲ್ಲಿ ಡಂಗುರ ಸಾರಿದ್ದಾರೆ.

ಅಲ್ಲದೇ ಅಕ್ಕಪಕ್ಕದ ಊರುಗಳಿಂದ ಬಂದವರು ಆದಷ್ಟು ಬೇಗ ತಮ್ಮ ತಮ್ಮ ಊರುಗಳಿಗೆ ತೆರಳಬೇಕು. ಇಲ್ಲದಿದ್ದರೆ 21 ದಿನಗಳ ಕಾಲ ಯಾರೂ ಊರಿಂದ ಹೊರ ಹೋಗಲು ಮತ್ತು ಒಳಗೆ ಬರದಂತೆ ನಿರ್ಬಂಧ ಮಾಡುವುದಾಗಿ ತಿಳಿಸಿದ್ದರು. ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಎಲ್ಲರೂ 21 ದಿನ ನಿಮ್ಮ ಮನೆಯಲ್ಲೇ ಇದ್ದು ಬಿಡಿ ಅಂತ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *