– ದಿನಸಿ, ತರಕಾರಿ ಖರೀದಿಗೂ ಟೈಂ ಫಿಕ್ಸ್
ಮೈಸೂರು: ಜಿಲ್ಲೆಯಲ್ಲಿ ಮತ್ತೆ ಮೂರು ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢವಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 61ಕ್ಕೇರಿದೆ. ಹೀಗಾಗಿ ಇಂದಿನಿಂದ ಸ್ಟ್ರಿಕ್ಟ್ ರೂಲ್ಸ್ ಜಾರಿಯಾಗುತ್ತಿದೆ.
ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಹಾಟ್‍ಸ್ಪಾಟ್‍ಗಳ ಪಟ್ಟಿಯಲ್ಲಿ ಮೈಸೂರು ಕೂಡ ಇದೆ. ಈಗಾಗಲೇ ನಂಜನಗೂಡಿನ ಔಷಧಿ ಕಂಪನಿ ನೌಕರನಿಂದಾಗಿ ಇಡೀ ಮೈಸೂರು ರೆಡ್‍ಝೋನ್‍ನಲ್ಲಿದೆ. 12 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಅನ್ನೋ ಸಮಾಧಾನ ಮೂಡಿದ ಬೆನ್ನಲ್ಲೇ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ.

ಗುರುವಾರ ಮೂರು ಪಾಸಿಟಿವ್ ಬಂದಿದ್ದು, ಇದು ಕೂಡ ನಂಜನಗೂಡಿನ ಜ್ಯುಬಿಲಿಯೆಂಟ್‍ನದ್ದೇ ಎಂಬುದು ಆತಂಕಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿನ 61 ಕೊರೊನಾ ಪಾಸಿಟಿವ್ ಪ್ರಕರಣದಲ್ಲಿ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆ ಮೂಲದ್ದೇ 50 ಪ್ರಕರಣ ಇದೆ. ಇದರ ಜೊತೆಗೆ 8 ಮಂದಿ ತಬ್ಲಿಘಿಗಳಿದ್ದಾರೆ. ವಿದೇಶದಿಂದ ವಾಪಸ್ ಬಂದಿದ್ದ ಇಬ್ಬರಿಗೆ ಹಾಗೂ ಓರ್ವ ವೃದ್ಧರಿಗೆ ಸೋಂಕು ತಗುಲಿದೆ.
ಮೈಸೂರಲ್ಲಿ ರೆಡ್ ಅಲರ್ಟ್
* ಮೈಸೂರಿನಲ್ಲಿ ಲಾಕ್‍ಡೌನ್ ನಿಯಮ ಕಠಿಣ.
* ಬೆಳಗ್ಗೆ 6ರಿಂದ 12ವರೆಗೆ ಅಗತ್ಯ ಪದಾರ್ಥಗಳಿಗ ಖರೀದಿಗೆ ಅವಕಾಶ.
* ದ್ವಿಚಕ್ರ ವಾಹನ ಚಾಲನೆಗೆ ಒಬ್ಬರಿಗಷ್ಟೇ ಅವಕಾಶ.
* ಕಾರು ಸಂಚಾರ ವೇಳೆ ಇಬ್ಬರಿಗೆ ಮಾತ್ರ ಅವಕಾಶ.
* ಮನೆಯಿಂದ ಎರಡು ಕಿಲೋ ಮೀಟರ್ ವ್ಯಾಪ್ತಿ ಮೀರಿ ಸಂಚರಿಸುವಂತಿಲ್ಲ.
* ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ವಾಹನ ಸಂಚಾರ ನಿಷೇಧ.
* ಮಧ್ಯಾಹ್ನ 12 ಗಂಟೆ ನಂತರ ಕಾಲ್ನಡಿಗೆಯಲ್ಲಿ ಹೋಗಿ ವಸ್ತು ಖರೀದಿಸಬಹುದು.
* ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಎಲ್ಲಾ ಅಂಗಡಿ ಬಂದ್.
* ಮನೆಯಿಂದ ಹೊರಬರುವವರು ಗುರುತಿನ ಚೀಟಿ ಇಟ್ಟುಕೊಳ್ಳೋದು ಕಡ್ಡಾಯ.
* ಮಾಸ್ಕ್ ಧರಿಸೋದು ಕಡ್ಡಾಯ.

ಮೈಸೂರು ಹಾಟ್‍ಸ್ಪಾಟ್ ಆಗಿರೋ ಕಾರಣ ಇಂದಿನಿಂದ ಲಾಕ್‍ಡೌನ್‍ನಲ್ಲಿ ಕಠಿಣತೆ ಇರಲಿದೆ. ಬೆಳಗ್ಗೆ 6ರಿಂದ 12 ವರೆಗೆ ಅಗತ್ಯ ಪದಾರ್ಥಗಳಿಗ ಖರೀದಿಗೆ ಅವಕಾಶ. ಕಾಲ್ನಡಿಗೆಯಲ್ಲಿ ಹೋಗಿ ಪದಾರ್ಥ ಖರೀದಿ ಮಾಡಬಹುದು. ಮನೆಯಿಂದ ಹೊರಗೆ ಬರುವವರು ಕಡ್ಡಾಯವಾಗಿ ಗುರುತಿನ ಚೀಟಿ ಇರಬೇಕು, ಮಾಸ್ಕ್ ಧರಿಸಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರ ಗುಪ್ತಾ ಆದೇಶಿಸಿದ್ದಾರೆ.

ಮೈಸೂರು ಡಿಸಿ ಅಭಿರಾಂ ಜಿ ಶಂಕರ್ ನಗರದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಬಡಾವಣೆಗಳ ಮಾಹಿತಿ ನೀಡಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತ, ವಿಜಯನಗರ ಮೊದಲ ಹಂತ, ನಜರ್‍ಬಾದ್, ಜನತಾನಗರ, ಕುವೆಂಪುನಗರ, ಜೆಪಿ ನಗರ, ಗೋಕುಲಂ, ಜಯಲಕ್ಷ್ಮೀಪುರಂ, ಶ್ರೀರಾಂಪುರ ಎರಡನೇ ಹಂತ, ಸರ್ದಾರ್ ವಲ್ಲಭಬಾಯಿ ಪಟೇಲ್ ನಗರ 2ನೇ ಹಂತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇವೆ ಎಂದು ತಿಳಿಸಿದ್ದಾರೆ. ಪಾಸಿಟಿವ್ ಪತ್ತೆಯಾದ ಸೋಂಕಿತರ ಮನೆಯ ರಸ್ತೆಗೆ ನಿರ್ಬಂಧ ಹಾಕಿದ್ದು, ಮೂರು ಕಿಲೋ ಮೀಟರ್‍ವರೆಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಾಪ್ ಕಾಮ್ಸ್ ಮೂಲಕ ಆ ರಸ್ತೆಯ ಮನೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ನಡೆದಿದೆ.
ಚೀನಾದಿಂದ ಬಂದ ಔಷಧಿ ಕಂಟೈನರ್ ನಿಂದ ಸೋಂಕು ಹರಡಿದೆ ಅಂತ ಹೇಳಲಾಗಿತ್ತು. ಆದರೆ ಈಗ ಈ ಬಗ್ಗೆ ಪುಣೆಯ ಎನ್‍ಐವಿಯಿಂದ ವರದಿ ಬಂದಿದ್ದು, ಕಂಟೈನರ್ ನಿಂದ ಸೋಂಕು ಹರಡಿಲ್ಲ ಅನ್ನೋದು ಬಹಿರಂಗವಾಗಿದೆ.

Leave a Reply