ಮೇ 3ರ ನಂತ್ರ ಮದ್ಯ ಮಾರಾಟವಾಗದಿದ್ರೆ ಬಿಯರ್ ನಾಶ?

– ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ವರ್ತಕರ ಮನವಿ
– ರಾಜ್ಯ ಸರ್ಕಾರ ಎಣ್ಣೆ ಮಾರಾಟಕ್ಕೆ ಅನುಮತಿ ನೀಡುತ್ತಾ?

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳು ಬಂದ್ ಆಗಿದ್ದು ಮೇ 3ರ ಬಳಿಕವೂ ಲಾಕ್‍ಡೌನ್ ತೆಗೆಯದೇ ಇದ್ದರೆ ಬಿಯರ್ ಕಥೆ ಏನು ಎಂಬ ಪ್ರಶ್ನೆ ಎದ್ದಿದೆ.

ಬಿಯರ್ ಶೆಲ್ಫ್ ಲೈಫ್ ಇರುವುದು ಕೇವಲ ಮೂರು ತಿಂಗಳ ಅವಧಿಯಷ್ಟೇ. ಹೀಗಾಗಿ ರಾಜ್ಯದಲ್ಲಿ ಮೇ 3ರ ನಂತರ ಮದ್ಯ ಮಾರಟಕ್ಕೆ ಅವಕಾಶ ಕೊಡದೇ ಇದ್ದರೆ ಬಾರ್‌ನಲ್ಲಿ ಸ್ಟಾಕ್ ಇಟ್ಟಿರುವ ಬಿಯರ್ ನಾಶ ಮಾಡಬೇಕಾದ ಆತಂಕ ಎದುರಾಗಿದೆ.

ಕೊರೊನಾದಿಂದಾಗಿ ಮಾರ್ಚ್ 23ರಿಂದ ಬಾರ್ ತೆರೆದಿಲ್ಲ. ಈಗ ಸರ್ಕಾರ ಮೇ 3ರ ನಂತರವೂ ಮದ್ಯ ಮಾರಾಟಕ್ಕೆ ಅವಕಾಶ ಕೊಡದೇ ಇದ್ದರೆ ಬಿಯರ್ ಶೆಲ್ಫ್ ಅವಧಿ ಪೂರ್ಣಗೊಳ್ಳುತ್ತದೆ. ಹೀಗಾಗಿ ಬಿಯರ್ ಬಾಟಲ್ ಗಳನ್ನು ನಾಶ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ಬಂದರೆ ಬಿಯರ್‍ಗೆ ಬಹಳ ಬೇಡಿಕೆ ಇರುತ್ತದೆ.

ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಪ್ರತಿನಿತ್ಯವೂ 60 ಕೋಟಿ ರೂ. ಆದಾಯ ಬರುತ್ತಿತ್ತು. ವಾರ್ಷಿಕವಾಗಿ ಹೇಳುವುದಾದರೆ 22 ಸಾವಿರ ಕೋಟಿ ರೂ. ಆದಾಯ ರಾಜ್ಯದ ಬೊಕ್ಕಸಕ್ಕೆ ಸೇರುತ್ತಿತ್ತು. ಆದರೆ ಈಗ ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ಕೇಸ್ ಬಿಯರ್ ಸ್ಟಾಕ್‍ನಲ್ಲಿದೆ. ಇದರ ಅಂದಾಜು ಮೌಲ್ಯ 25 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಈ ನಷ್ಟವನ್ನು ತಡೆಯಲು ಮದ್ಯದಂಗಡಿ ತೆರೆಯಲು ಅವಕಾಶ ಕೊಡಿ. ಇಲ್ಲವೇ ಸಮಯವನ್ನ ನಿಗದಿ ಮಾಡಿ. ಒಂದು ವೇಳೆ ಮೇ 3ರ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡದಿದ್ದರೆ ಭಾರೀ ನಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ ಎಂದು ಮದ್ಯದಂಗಡಿ ಮಾಲೀಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ವೈನ್ ವ್ಯಾಪಾರಿ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ, ಕೆಲವು ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅನೇಕ ಬಾರ್‍ಗಳಲ್ಲಿ ಬಿಯರ್ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲ ಲೈಸನ್ಸ್ ದಾರರಿಗೆ ನಾಲ್ಕೈದು ಗಂಟೆ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕು. ಶೆಲ್ಫ್ ಲೈಫ್ ಮೂರು ತಿಂಗಳು ಮಾತ್ರ ಇರುವ ಕಾರಣ ಮಾರಾಟವಾಗದೇ ಇದ್ದರೆ ನಾಶ ಮಾಡಬೇಕಾಗುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸಲು ಗ್ರಾಹಕರಿಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮದ್ಯ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟರೆ ಸರ್ಕಾರಕ್ಕೆ ಆದಾಯ ಸಿಗುತ್ತದೆ. ನಮ್ಮ ಜೀವನಕ್ಕೂ ಸ್ವಲ್ಪ ಆಧಾರವಾಗುತ್ತದೆ. ಬಾರ್ ಗಳಲ್ಲಿ ಕೆಲಸ ಮಾಡುವವರಿಗೆ ವೇತನ, ಅಂಗಡಿ ಬಾಡಿಗೆ ಕೊಡಬೇಕು. ಹೀಗೆ ನೂರೆಂಟು ಸಮಸ್ಯೆಗಳು ನಮಗೂ ಇವೆ ಎಂದು ಕರುಣಾಕರ್ ಹೆಗ್ಡೆ ಹೇಳಿದರು.

Comments

Leave a Reply

Your email address will not be published. Required fields are marked *